ಹೊಸದಿಗಂತ ಡಿಜಿಟಲ್ ಡೆಸ್ಕ್:
ಶವಗಳ ಮೇಲೆ ಅತ್ಯಾಚಾರವನ್ನು ಶಿಕ್ಷಾರ್ಹಗೊಳಿಸುವುದಕ್ಕೆ ಐಪಿಸಿಯ ಸಂಬಂಧಪಟ್ಟ ನಿಬಂಧನೆಗಳಿಗೆ ತಿದ್ದುಪಡಿ ತರಬೇಕು ಅಥವಾ ಹೊಸ ಕಾನೂನನ್ನು ರೂಪಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಶವದ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಗೆ ಶಿಕ್ಷೆ ನೀಡುವುದಕ್ಕೆ ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ ಅವಕಾಶ ಇಲ್ಲದ ಕಾರಣ ಆರೋಪಿಯನ್ನು ಈ ಆರೋಪದಿಂದ ಬಿಡುಗಡೆ ಮಾಡಿರುವ ಹೈಕೋರ್ಟ್, ಕೇಂದ್ರಕ್ಕೆ ಈ ಸೂಚನೆ ನೀಡಿದೆ.
ತುಮಕೂರಿನ ಯುವತಿಯೊಬ್ಬಳ ಕೊಲೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಪೀಠ, ಮೃತದೇಹದ ಮೇಲಿನ ಅತ್ಯಾಚಾರಕ್ಕೆ ಶಿಕ್ಷೆ ನೀಡಲು ಸದ್ಯಕ್ಕೆ ಕಾನೂನಿಲ್ಲದ ಕಾರಣ ಕೊಲೆ ಅಪರಾಧಕ್ಕೆ ಮಾತ್ರ ಜೀವಾವಧಿ ಶಿಕ್ಷೆ ವಿಧಿಸಿದೆ. ತುಮಕೂರಿನ ರಂಗರಾಜು ಅಲಿಯಾಸ್ ವಾಜಪೇಯಿ ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ.
ಆದರೆ ಆತ ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕೆ ಶಿಕ್ಷೆ ನೀಡಲು ಐಪಿಸಿ ಸೆಕ್ಷನ್ ಅಡಿಯಲ್ಲಿ ನಿರ್ದಿಷ್ಟ ನಿಬಂಧನೆಗಳಿಲ್ಲದ ಕಾರಣ ಈ ಅಪರಾಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ರ ಅಡಿಯಲ್ಲಿ ಬರುತ್ತದೆಯೋ ಅಥವಾ ಸೆಕ್ಷನ್ 377 ಅಡಿಯಲ್ಲಿ ಆತನನ್ನು ಶಿಕ್ಷಿಸಬೇಕೋ ಎಂಬ ಗೊಂದಲ ಉಂಟಾಗಿತ್ತು. ಸೆಕ್ಷನ್ 375 ಹಾಗೂ 377 ಅನ್ವಯವಾಗದ ಕಾರಣ ಇದರ ಅಡಿಯಲ್ಲಿ ಆತನನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾ. ಬಿ ವೀರಪ್ಪ ಹಾಗೂ ವೆಂಕಟೇಶ್ ನಾಯ್ಕ್ ಟಿ ಹೇಳಿದ್ದಾರೆ.
ಇಂಗ್ಲೆಂಡ್, ಕೆನಡಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾಗಳಲ್ಲಿ ಮೃತದೇಹಗಳ ಮೇಲಿನ ವಿಕೃತಿಗೆ ಶಿಕ್ಷೆಯಿದೆ. ಜೀವನದ ಹಕ್ಕಿನಲ್ಲಿ ಮೃತ ದೇಹದ ಘನತೆಯ ಹಕ್ಕೂ ಸೇರಿದೆ. ಹೀಗಾಗಿ 6 ತಿಂಗಳಲ್ಲಿ ಐಪಿಸಿ ಕಾಯ್ದೆ ತಿದ್ದುಪಡಿ ಮಾಡಬೇಕು ಎಂದು ಪೀಠವು ಶಿಫಾರಸು ಮಾಡಿದೆ.