ಹೊಸದಿಗಂತವರದಿ, ಮೈಸೂರು:
ಹುಣಸೂರು ತಾಲ್ಲೂಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದರು.
ಬುಧವಾರ ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಹುಟ್ಟೂರು ಹುಣಸೂರು ಪ್ರತ್ಯೇಕ ಜಿಲ್ಲೆಯಾದ್ರೆ ಸಾಕಷ್ಟು ಅನುಕೂಲಗಳು ಆಗುತ್ತದೆ.ಮೈಸೂರು ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಒತ್ತಡ ಇದೆ. ತಾಲೂಕು ಕೇಂದ್ರಗಳಿಗೆ ಹೋಗಲು ಕಷ್ಟವಾಗುತ್ತದೆ. ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ೬ ತಾಲೂಕುಗಳಿಗೆ ನಾಲ್ಕು ಜನ ಶಾಸಕರಿದ್ದೇವೆ. ಎಲ್ಲಾ ಶಾಸಕರ ಜೊತೆ ಮಾತನಾಡಿದ್ದೇನೆ. ಸಿಎಂ ಜೊತೆಯೂ ಸಹ ಮಾತನಾಡುತ್ತೇನೆ. ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ ಕೋಟೆ ರಾಜ್ಯದಲ್ಲೇ ಸಂಪತ್ಭರಿತ ತಾಲ್ಲೂಕು. ನೂರಾರು ಕೋಟಿ ತಂಬಾಕಿನಿoದ ಆದಾಯ ಬರುವ ತಾಲ್ಲೂಕುಗಳಿವೆ. ಆರು ತಾಲೂಕುಗಳನ್ನ ಸೇರಿಸಿ ಹುಣಸೂರು ಜಿಲ್ಲೆಯಾಗಬೇಕು ಎಂದು ಒತ್ತಾಯಿಸಿದರು.
ನಮ್ಮ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಹೀಗಾಗಿ ಡಿ. ದೇವರಾಜ ಅರಸು ಅವರ ಹೆಸರು ಅಮರವಾಗಬೇಕು, ಹುಣಸೂರು ತಾಲೂಕು ಪ್ರತ್ಯೇಕ ಜಿಲ್ಲೆಯಾಗಬೇಕು. ಎಚ್.ಡಿ ಕೋಟೆ, ಪಿರಿಯಾಪಟ್ಟಣ ಹಾಗೂ ಹುಣಸೂರಿನಲ್ಲಿ ಅತಿ ಹೆಚ್ಚು ಬುಡಕಟ್ಟು ಜನಾಂಗದವರು ಇದ್ದಾರೆ. ಅವರ ಕಷ್ಟಗಳಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸುತ್ತಿಲ್ಲ. ನಾನು ಈ ವಿಚಾರದಲ್ಲಿ ಹೋರಾಟ, ಸಂಘರ್ಷ ಮಾಡುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುತ್ತೇನೆ ಎಂದು ಹೇಳಿದರು.
ಬಿಜೆಪಿಯವರು ಶ್ರೀರಾಮನನ್ನ ಲೋಕಸಭಾ ಚುನಾವಣೆ ಚೀಪ್ ಕ್ಯಾಂಪೇನರ್ ಮಾಡಿಕೊಂಡಿದ್ದಾರೆ. ಇದು ಸರಿಯಲ್ಲ ಶ್ರೀರಾಮ ಎಲ್ಲರ ಆಸ್ತಿ. ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ ಶ್ರೀ ರಾಮಮಂದಿರ ಉದ್ಟಾಟನೆಯಾಗಿದೆ. ಜನರು ಬಹಳ ಸಂತೋಷವಾಗಿದ್ದಾರೆ. ರಾಮ ಭಾರತೀಯರ ಆರಾಧ್ಯದೈವ, ಭಾರತೀಯತ ಅಸ್ಮೀತೆ. ನೀವು ಕೆಲಸ ಮಾಡಿದ್ದೀರಾ ಶಭಾಷ್. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ೫೦೦ ವರ್ಷಗಳ ಸುಧೀರ್ಘ ಸಮಸ್ಯೆಯನ್ನ ಬಗೆಹರಿಸಿದ್ದಾರೆ. ಜನರ ಕಷ್ಟಗಳಿಗೆ ಮೋದಿ ಇವಾಗಲಾದರೂ ಸ್ಪಂದಿಸಬೇಕು. ಚುನಾವಣೆಗೂ ಮುನ್ನ ಪ್ರತಿಯೊಬ್ಬರಿಗೆ ೧೫ ಲಕ್ಷ ಕೊಡುತ್ತೇನೆ ಅಂದಿದ್ರಿ. ಆದಷ್ಟು ಬೇಗ ಹಣವನ್ನ ಹಾಕಿ. ಜನರು ಸಾಕಷ್ಟು ಕಷ್ಟದಲ್ಲಿದ್ದು, ಎಲ್ಲಾ ವಸ್ತುಗಳಿಗೆ ಜಿಎಸ್ ಟಿ ಕಟ್ಟುತ್ತಿದ್ದಾರೆ. ಅತಿ ಹೆಚ್ಚು ಜಿಎಸ್ ಟಿ ಕಟ್ಟುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ನೀರವ್ ಮೋದಿ ಅವರಿಂದ ದೇಶಕ್ಕೆ ಲಕ್ಷಾಂತರ ಕೋಟಿ ನಷ್ಟವಾಗಿದೆ. ಅವರನ್ನ ಬಂಧಿಸಿ ಕರೆತರುತ್ತೇನೆ ಅಂದಿದ್ದರು ಅದು ಸಹ ಸಾಧ್ಯವಾಗಿಲ್ಲ ಎಂದು ಕುಟುಕಿದರು.