ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮ ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಮಾತ್ರವಲ್ಲ, ರಾಷ್ಟ್ರೀಯ ಭದ್ರತೆಗೂ ಸಹಕಾರಿಯಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತೀಯ ಉದ್ಯಮ ಮಹಾ ಒಕ್ಕೂಟದ ವಾರ್ಷಿಕ ಬ್ಯುಸಿನೆಸ್ ಸಭೆಯಲ್ಲಿ ಮಾತನಾಡಿದ ಅವರು, ಉದ್ಯಮ ವಲಯ ಹಾಗೂ ಸರ್ಕಾರದ ಮಧ್ಯೆ ಉತ್ತಮ ತಾಳಮೇಳವಾಗುತ್ತಿರುವುದು ಭಾರತವನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿ ಮಾಡಬಲ್ಲುದು ಎಂದಿದ್ದಾರೆ.
ಈ ವೇಳೆ ಐದನೇ ತಲೆಮಾರಿನ ಏರ್ಕ್ರಾಫ್ಟ್ ನಿರ್ಮಿಸಲು ಯೋಜಿಸಲಾಗಿರುವ ಎಎಂಸಿಎ ಯೋಜನೆಯನ್ನು ಕಾರ್ಯಗತಗೊಳಿಸುವ ಮಾದರಿಗೆ ಅನುಮೋದನೆ ನೀಡಿದ್ದನ್ನು ಐತಿಹಾಸಿಕ ಎಂದು ಬಣ್ಣಿಸಿದ ಅವರು, ಭಾರತದ ದೇಶೀಯ ಏರೋಸ್ಪೇಸ್ ಕ್ಷೇತ್ರವನ್ನು ಇದು ಉತ್ತುಂಗಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಅಭಿಪ್ರಾಯಪಟ್ಟರು.
ಎಎಂಸಿಎ ಪ್ರಾಜೆಕ್ಟ್ ಅಡಿಯಲ್ಲಿ ಐದು ರೀತಿಯ ಫೈಟರ್ ಜೆಟ್ಗಳ ಪ್ರೋಟೋಟೈಪ್ ಅಭಿವೃದ್ಧಿಪಡಿಸುವ ಗುರಿ ಇದೆ. ಈ ಪ್ರಾಜೆಕ್ಟ್ ಮೇಕ್ ಇನ್ ಇಂಡಿಯಾ ಯೋಜನೆಯಲ್ಲೇ ಪ್ರಮುಖ ಮೈಲಿಗಲ್ಲಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಮೇಕ್ ಇನ್ ಇಂಡಿಯಾ ಯೋಜನೆ ಆಪರೇಷನ್ ಸಿಂದೂರ್ಗೆ ಕನ್ನಡಿ ಹಿಡಿದಿದೆ . ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ದೇಶೀಯವಾಗಿ ನಿರ್ಮಿತವಾದ ಶಸ್ತ್ರಾಸ್ತ್ರಗಳು ಮುಖ್ಯ ಪಾತ್ರವಹಿಸಿದ್ದನ್ನು ತಿಳಿಸಿದರು.