ಮೇಕ್ ಇನ್ ಇಂಡಿಯಾ ಒಳ್ಳೆ ಐಡಿಯಾ, ಆದರೆ ಯಶಸ್ವಿಯಾಗಲು ಪ್ರಧಾನಿ ಮೋದಿ ವಿಫಲ: ರಾಹುಲ್ ಗಾಂಧಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ ಬಜೆಟ್ ಅಧಿವೇಶನ ಆರಂಭದ ದಿನ ಉಭಯ ಸದನಗಳನ್ನುದ್ದೇಶಿಸಿದ್ದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ (make in india) ಯೋಜನೆ ವಿಫಲವಾಗಿದೆ. ದೇಶದ ಉತ್ಪಾದನಾ ಕ್ಷೇತ್ರ 60 ವರ್ಷಗಳಲ್ಲೇ ಕುಸಿತ ಕಂಡಿದೆ.
ಪ್ರಸ್ತುತ ಎನ್​ಡಿಎ ಸರ್ಕಾರದ ಅಡಿಯಲ್ಲಿ ಭಾರತದ ಉತ್ಪಾದನಾ ವಲಯವು ನಷ್ಟ ಅನುಭವಿಸಿದೆ. ಮೋದಿಯ ಕನಸಾದ ‘ಮೇಕ್ ಇನ್ ಇಂಡಿಯಾ’ ಬಹಳ ಒಳ್ಳೆಯ ಐಡಿಯಾ ಆಗಿತ್ತು. ಆದರೆ ಅದು ವಿಫಲವಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮ ಒಳ್ಳೆಯ ಐಡಿಯಾ ಎಂದು ನಾನು ಒಪ್ಪುತ್ತೇನೆ. ನಾನು ಪ್ರಧಾನಿ ನರೇಂದ್ರ ಮೋದಿಯನ್ನು ದೂಷಿಸುತ್ತಿಲ್ಲ. ಅವರು ಪ್ರಯತ್ನಿಸಲಿಲ್ಲ ಎಂದು ಹೇಳುವುದು ನ್ಯಾಯವಲ್ಲ. ಪ್ರಧಾನಿ ಮೇಕ್ ಇನ್ ಇಂಡಿಯಾ ಯಶಸ್ವಿಯಾಗಲು ಪ್ರಯತ್ನಿಸಿದರು, ಆದರೆ ಅವರು ವಿಫಲರಾದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನಾವು ಪ್ರತಿಮೆಗಳು, ಕಾರ್ಯಗಳು ಮತ್ತು ಹೂಡಿಕೆಗಳನ್ನು ನೋಡಿದ್ದೇವೆ. (ಆದರೆ) ಫಲಿತಾಂಶವು ನಿಮ್ಮ ಮುಂದೆಯೇ ಇದೆ. ಉತ್ಪಾದನೆ 2014 ರಲ್ಲಿ GDP ಯ ಶೇಕಡಾ 15.3 ರಿಂದ ಇಂದು GDP ಯ ಶೇಕಡಾ 12.6 ಕ್ಕೆ ಇಳಿದಿದೆ. ಇದು 60 ವರ್ಷಗಳಲ್ಲಿ ಉತ್ಪಾದನೆ ವಲಯದಲ್ಲಿ ದಾಖಲಾಗಿರುವ ಅತ್ಯಂತ ಕಡಿಮೆ ಪಾಲು . ಇದಕ್ಕೆ ನಾನು ಪ್ರಧಾನಿ ಮೋದಿಯನ್ನು ದೂಷಿಸುತ್ತಿಲ್ಲ. ಉತ್ಪಾದನೆಯನ್ನು ಹೆಚ್ಚಿಸಲು ಅತ್ಯುತ್ತಮ ಕಂಪನಿಗಳು ಪ್ರಯತ್ನಿಸಿದ್ದವು. ಆದರೆ ವಿಫಲವಾದವು. ಈಗ ನಾವು ಉತ್ಪಾದನೆಯನ್ನು ಚೀನಾಕ್ಕೆ ಹಸ್ತಾಂತರಿಸಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.

ನಾವು ಒಂದು ದೇಶವಾಗಿ, ಉತ್ಪಾದನೆಯನ್ನು ಸಂಘಟಿಸುವಲ್ಲಿ ವಿಫಲರಾಗಿದ್ದೇವೆ. ನಾವು ಅದನ್ನು ಚೀನಾಕ್ಕೆ ಹಸ್ತಾಂತರಿಸಿದ್ದೇವೆ. ಈ ಫೋನ್ ಭಾರತದಲ್ಲಿ ತಯಾರಿಸಲ್ಪಟ್ಟಿಲ್ಲ. ಇದನ್ನು ಭಾರತದಲ್ಲಿ ಕೇವಲ ಜೋಡಿಸಲಾಗುತ್ತದೆ. ಇದರ ಎಲ್ಲಾ ಪಾರ್ಟ್​ಗಳನ್ನು ಚೀನಾದಲ್ಲಿ ತಯಾರಿಸಲಾಗುತ್ತದೆ. ನಾವು ಪ್ರತಿ ಬಾರಿ ಫೋನ್ ಬಳಸುವಾಗ ಅಥವಾ ಬಾಂಗ್ಲಾದೇಶದ ಶರ್ಟ್ ಧರಿಸಿದಾಗ ನಾವು ಅವರಿಗೆ ತೆರಿಗೆ ಪಾವತಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಉದ್ಯೋಗದ ವಿಷಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಥವಾ ಪ್ರಸ್ತುತ ಎನ್‌ಡಿಎ ಸರ್ಕಾರವೆರಡೂ ಈ ದೇಶದ ಯುವಕರಿಗೆ ಉದ್ಯೋಗದ ಬಗ್ಗೆ ಸ್ಪಷ್ಟ ಉತ್ತರ ನೀಡಲು ಸಾಧ್ಯವಾಗಲಿಲ್ಲ ಎಂದು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಭಾರತ ಆರ್ಥಿಕವಾಗಿ ಬೆಳೆದಿದ್ದರೂ, ನಿರುದ್ಯೋಗ ನಿರಂತರ ಸವಾಲಾಗಿ ಉಳಿದಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!