ಹೊಸ ದಿಗಂತ ವರದಿ, ಹುಬ್ಬಳ್ಳಿ:
ರಾಜಸ್ಥಾನ ಹಾಗೂ ಛತ್ತೀಸಘಡ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಭರವಸೆ ನೀಡಿ ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಈಡೇರಿಸಿಲ್ಲ. ಅದೇ ರೀತಿ ರಾಜ್ಯದಲ್ಲಿ ಸುಳ್ಳ ಭರವಸೆ ನೀಡುವ ಮೂಲಕ ಜನರನ್ನು ಭ್ರಮಿತಗೊಳಿಸುತ್ತಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ರಾಜಸ್ಥಾನ ಹಾಗೂ ಛತ್ತೀಸಘಡ ಚುನಾವಣಾ ಪೂರ್ವದಲ್ಲಿ ನಾವು ಅಧಿಕಾರಕ್ಕೆ ಬಂದರೇ ರೈತರ ಸಾಲಮನ್ನಾ, ನಿರುದ್ಯೋಗಿ ಯುವಕರಿಗೆ 2500 ರೂ. ಭತ್ಯೆ ನೀಡುತ್ತೇವೆ ಎಂದಿದ್ದರು. ಆದರೆ ಇನ್ನೂ ಈಡೇರಿಸಿಲ್ಲ. ಇಂತಹ ಸುಳ್ಳು ಭರವಸೆ ನೀಡುವ ಮೂಲಕ ಕಾಂಗ್ರೆಸ್ ಸುಳ್ಳು ಭರವಸೆಗಳ ಸರದಾರ ಎನ್ನುವುದನ್ನು ಸಾಬೀತುಪಡಿಸಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚುನಾವಣೆ ಪೂರ್ವದಲ್ಲಿಯೇ ಸಿಎಂ ಕುರ್ಚಿಗಾಗಿ ಮುಸುಕಿನ ಗುದ್ದಾಟ ನಡೆಸಿದ್ದಾರೆ. ಇದರಿಂದ ಗೊಂದಲದ ವಾತಾವರಣ ಕಾಂಗ್ರೆಸ್ ನಿರ್ಮಾಣವಾಗಿದ್ದು, ಸೋಲಿನ ಭೀತಿಯಿಂದ ಹತಾಶೆಗೊಂಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿರುವ ಗೊಂದಲದಿಂದ ರಾಜ್ಯದ ಜನರು ಅಭಿವೃದ್ಧಿ ಪರ ಚಿಂತನೆ ಮಾಡುವ ಬಿಜೆಪಿಗೆ ಹೆಚ್ಚು ಒಲುವು ತೋರುತ್ತಿದ್ದಾರೆ. ಹೀಗಾಗಿ ಕೀಳುಮಟ್ಟದಲ್ಲಿ ಮಾತನಾಡುವ ಮೂಲಕ ಸಿಎಂ ಬೊಮ್ಮಾಯಿ ಅವರನ್ನು ಅವಮಾನಿಸುವ ಕೆಲಸವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದರು.