Friday, October 3, 2025

ಮಾಲೆಗಾಂವ್ ಸ್ಫೋಟ | ಪ್ರಧಾನಿ ಮೋದಿ, ಮೋಹನ್ ಭಾಗವತ್ ಹೆಸರು ಹೇಳುವಂತೆ ಒತ್ತಾಯ: ಪ್ರಜ್ಞಾ ಠಾಕೂರ್ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್;

ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ , ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವರ ಹೆಸರುಗಳನ್ನು ಹೇಳುವಂತೆ ತನಿಖಾಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರು ಎಂದು ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಹೇಳಿದ್ದಾರೆ.

2008ರ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಠಾಕೂರ್ ಸೇರಿದಂತೆ ಎಲ್ಲಾ ಏಳು ಆರೋಪಿಗಳನ್ನ ವಿಶೇಷ ಎನ್‌ಐಎ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.
.
ಇದಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ಞಾ ಠಾಕೂರ್ ಅವರು, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (MATS) ವಿರುದ್ಧ ಸ್ಫೋಟಕ ಆರೋಪ ಮಾಡಿ, ಅವರು (MATS), ನನ್ನನ್ನು ನಿರಂತರವಾಗಿ ಹಿಂಸಿಸಿ, ಈ ಜನರ ಹೆಸರು ಹೇಳಿ, ಆಗ ನಾವು ನಿಮ್ಮನ್ನು ಹೊಡೆಯುವುದನ್ನು ನಿಲ್ಲಿಸುತ್ತೇವೆ ಎಂದು ಹೇಳುತ್ತಲೇ ಇದ್ದರು” ಎಂದು ಆರೋಪ ಮಾಡಿದರು.

13 ದಿನಗಳ ಕಾಲ ನನ್ನನ್ನು ಅಕ್ರಮವಾಗಿ ಬಂಧಿಸಲಾಗಿದ್ದರೂ, ನಾನು, 24 ದಿನಗಳ ಕಾಲ ಎಟಿಎಸ್​ ಕಸ್ಟಡಿಯಲ್ಲಿದ್ದ ವೇಳೆ, ಭಾಗವತ್, ಮೋದಿ, ಯೋಗಿ ಹೆಸರು ಹೇಳುವಂತೆ ದೈಹಿಕ ಚಿತ್ರಹಿಂಸೆ ನೀಡಲಾಯಿತು ಎಂದರು.

ನನ್ನ ಬಂಧನವು, ಕೇಸರಿ ಭಯೋತ್ಪಾದನೆಯ ನಿರೂಪಣೆಯನ್ನು ಸೃಷ್ಟಿಸಲು ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಿದ ಪಿತೂರಿ. ಕಾಂಗ್ರೆಸ್ ಪಕ್ಷವು ಈ ದೇಶದ ಅಡಿಪಾಯವಾದ ಆರ್‌ಎಸ್‌ಎಸ್, ಸನಾತನ ಧರ್ಮ ಮತ್ತು ಸೈನ್ಯವನ್ನು ನಾಶಮಾಡಲು ಪ್ರಯತ್ನಿಸಿತು; ಆದರೆ ಸತ್ಯವು ಮೇಲುಗೈ ಸಾಧಿಸಿದೆ ಎಂದರು.

ನಾನು ವರ್ಷಗಳ ಕಾಲ ಅವಮಾನವನ್ನು ಸಹಿಸಿಕೊಂಡಿದ್ದೇನೆ. ನಾನು ಪದೇ ಪದೇ ಕಷ್ಟಪಡಬೇಕಾಯಿತು. ನಿರಪರಾಧಿಯಾಗಿದ್ದರೂ, ನನ್ನ ಮೇಲೆ ಅಪರಾಧಿ ಪ್ರಜ್ಞೆಯ ಕಳಂಕವನ್ನು ಹೇರಲಾಯಿತು. ಇಂದು ಕೇಸರಿ ಧ್ವಜಕ್ಕೆ ಸಿಕ್ಕ ಜಯ, ಹಿಂದುತ್ವಕ್ಕೆ ಸಿಕ್ಕ ಜಯ. ‘ಕೇಸರಿ ಭಯೋತ್ಪಾದನೆ’ಯ ಸುಳ್ಳು ನಿರೂಪಣೆಯನ್ನು ಅಂತಿಮವಾಗಿ ನಿರಾಕರಿಸಲಾಗಿದೆ’ ಎಂದು ಅವರು ಕಣ್ಣೀರನ್ನು ತಡೆದುಕೊಂಡು ಹೇಳಿದರು.