ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಯೋಗಿ ಆದಿತ್ಯನಾಥ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಮುಖಂಡ ಇಂದ್ರೇಶ್ ಕುಮಾರ್ ಅವರನ್ನು ಹೆಸರಿಸುವಂತೆ ಜೈಲಿನಲ್ಲಿದ್ದಾಗ ನನಗೆ ಚಿತ್ರಹಿಂಸೆ ನೀಡಲಾಯಿತು ಎಂದು ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ ಭಾನುವಾರ ಹೇಳಿದ್ದಾರೆ
ಪೊಲೀಸರು ವಿಚಾರಣೆ ವೇಳೆಯಲ್ಲಿ ಪದೇ ಪದೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಮೋಹನ್ ಭಾಗವತ್, ರವಿಶಂಕರ್ ಮತ್ತು ಇಂದ್ರೇಶ್ ಅವರ ಹೆಸರನ್ನು ಉಲ್ಲೇಖಿಸುತ್ತಿದ್ದರು ಎಂದು ಉಪಾಧ್ಯಾಯ ಹೇಳಿದರು.
ಮೊದಲ ದಿನದಿಂದ ನಾನು ನಿರಪರಾಧಿ ಎಂದು ನನಗೆ ತಿಳಿದಿತ್ತು. ನಾನೇ ಮೂರು ಬಾರಿ ಸ್ವಯಂ ಪ್ರೇರಿತನಾಗಿ ನಾರ್ಕೊ ಮತ್ತು ಪಾಲಿಗ್ರಾಫ್ ಪರೀಕ್ಷೆಗಳಿಗೆ ಒಳಗಾಗಿದ್ದೆ. ಆದರೆ ATS ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಿಲ್ಲ ಎಂದರು.
ನನ್ನನ್ನು ವರ್ಷನುಗಟ್ಟಲೇ ಏಕಾಂಗಿಯಾಗಿ ಇರಿಸಲಾಗಿತ್ತು. ನನ್ನನ್ನು ಜೈಲಿನಿಂದ ಬಿಡುಗಡೆ ಮಾಡಲು ರಾಜಕೀಯ ಮತ್ತು ಆಧ್ಯಾತ್ಮಿಕ ನಾಯಕರ ಹೆಸರನ್ನು ಹೇಳಲು ನನ್ನ ಮೇಲೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದರು. ನಾನು ಮಾಲೆಗಾಂವ್ ಗೆ ಭೇಟಿ ನೀಡಿರಲಿಲ್ಲ. ಆ ಘಟನೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಅಂದಿನ ಯುಪಿಎ ಸರ್ಕಾರದ ಪ್ರಭಾವದಿಂದ ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿ ತನಿಖೆ ನಡೆಸಲಾಯಿತು. ಅಧಿಕಾರಿಗಳು ಸೋನಿಯಾ ಗಾಂಧಿ, ದಿಗ್ವಿಜಯ ಸಿಂಗ್ ಮತ್ತು ಸುಶೀಲ್ ಕುಮಾರ್ ಶಿಂಧೆ ಅವರಂತಹ ನಾಯಕರ ಒತ್ತಡದಲ್ಲಿ ಕೆಲಸ ಮಾಡಿದರು ಎಂದು ಅವರು ಆರೋಪಿಸಿದರು.
ನಾನು 25 ಆರೋಪಗಳನ್ನು ಎದುರಿಸಿದ್ದೇನೆ. ನ್ಯಾಯಾಲಯದಲ್ಲಿ ಎಲ್ಲವೂ ಸುಳ್ಳು ಎಂದು ಸಾಬೀತಾಗಿದೆ. 17 ವರ್ಷಗಳ ನಂತರ ಅಂತಿಮವಾಗಿ ನ್ಯಾಯ ದೊರಕಿದೆ ಎಂದು ಅವರು ಹೇಳಿದರು.