Saturday, October 18, 2025

ಮಲ್ಲಿಕಾರ್ಜುನ ಖರ್ಗೆ-ಡಿಕೆಶಿ ಸೀಕ್ರೆಟ್ ಮೀಟಿಂಗ್: ಈ ಗೌಪ್ಯ ಚರ್ಚೆಯ ಹಿಂದಿರೋ ಕಾರಣವಾದ್ರು ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕೀಯದಲ್ಲಿ “ನವೆಂಬರ್ ಕ್ರಾಂತಿ” ಚರ್ಚೆಗಳು ಕೇಳಿಬರುತ್ತಿದ್ದು, ಈ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸದಾಶಿವನಗರದ ನಿವಾಸದಲ್ಲಿ ತಡರಾತ್ರಿ ಭೇಟಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.

ಈ ಭೇಟಿಯು ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟಿಸಿದೆ. ಸಂಪುಟ ಪುನರ್ ರಚನೆ, ಪವರ್ ಶೇರಿಂಗ್ ಸೇರಿದಂತೆ ಹಲವಾರು ವಿಷಯಗಳು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗೆ ಬಂದಿರುವ ಸಂದರ್ಭದಲ್ಲಿ ಡಿಕೆಶಿಯ ಈ ಭೇಟಿಯು ತಾಳ್ಮೆ ಮತ್ತು ಸಂಧಾನದ ನಿಟ್ಟಿನಲ್ಲಿ ನಡೆದ ಪ್ರಮುಖ ಬೆಳವಣಿಗೆಯೆಂದು ಪಕ್ಷದ ವಲಯಗಳು ವಿಶ್ಲೇಷಿಸುತ್ತಿವೆ.

ಮೂಲಗಳ ಪ್ರಕಾರ, ಖರ್ಗೆ ಅವರು ಡಿಕೆಶಿಗೆ ಹೈಕಮಾಂಡ್‌ನಿಂದ ಸ್ಪಷ್ಟ ಸಂದೇಶ ನೀಡಿದ್ದು, “ಪಕ್ಷ ನಿಷ್ಠೆ ಮತ್ತು ಸಹನೆಗೆ ತಕ್ಕ ಪ್ರತಿಫಲ ಖಚಿತ. ಬಿಹಾರ ಚುನಾವಣೆ ಮುಗಿದ ನಂತರ ಎಲ್ಲ ವಿಚಾರಗಳಿಗೂ ಸ್ಪಷ್ಟತೆ ಬರಲಿದೆ” ಎಂದು ಭರವಸೆ ನೀಡಿದ್ದಾರೆ. ಹೈಕಮಾಂಡ್ ರಾಜ್ಯದ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸೂಚಿಸಲಾಗಿದೆ.

ಡಿಕೆಶಿ–ಖರ್ಗೆ ಮಾತುಕತೆಯು ಸಿದ್ದರಾಮಯ್ಯ–ಶಿವಕುಮಾರ್ ನಡುವಿನ ಸಂಬಂಧದಲ್ಲಿಯೂ ಶಾಂತಿಯ ವಾತಾವರಣ ಸೃಷ್ಟಿಸಬಹುದು ಎಂದು ರಾಜಕೀಯ ವಲಯದಲ್ಲಿ ಊಹಿಸಲಾಗುತ್ತಿದೆ. ಸಂಪುಟ ಪುನಾರಚನೆ ಕುರಿತ ಚರ್ಚೆ ಮುಂದಿನ ತಿಂಗಳಲ್ಲಿ ಹೊಸ ತಿರುವು ಪಡೆಯಬಹುದು.

error: Content is protected !!