ಹೊಸದಿಗಂತ ವರದಿ, ಮೈಸೂರು:
ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜು ಖರ್ಗೆ ಅವರು ಪವರ್ ಪುಲ್ ನಾಯಕರಲ್ಲ, ಅವರೊಬ್ಬ ಪವರ್‌ಲೆಸ್ ನಾಯಕ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ಟೀಕಿಸಿದರು.
ಮೈಸೂರು ನಗರದ ಹೋಟೆಲ್ ಲಲಿತ್‌ಮಹಲ್ ಪ್ಯಾಲೆಸ್‌ನಲ್ಲಿ ಭಾನುವಾರ ನಡೆದ ಬಿಜೆಪಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಲ್ಲಿಕಾರ್ಜು ಖರ್ಗೆಯವರು ಸಂಸದರಾಗಿದ್ದರು, ಸಚಿವರಾಗಿದ್ದರು, ಅಲ್ಲದೇ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಹೀಗಿದ್ದರೂ ಕಳೆದ 50 ವರ್ಷಗಳಿಂದ ದಲಿತ ನಾಯಕರೊಬ್ಬರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಕೇಳಲಿಲ್ಲ, ಆ ಬಗ್ಗೆ ಹೋರಾಟ ಮಾಡಲಿಲ್ಲ. ದಲಿತರ ಉದ್ಧಾರಕ್ಕಾಗಿ ಯಾವುದೇ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಲಿಲ್ಲ. ಅವರದ್ದೇ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿದರೂ ಅಂಬೇಡ್ಕರ್ ಜಯಂತಿಯoದು ರಜೆ ಘೋಷಣೆ ಮಾಡುವಂತೆ ಮಾಡಲಿಲ್ಲ. ದಲಿತರ ಉದ್ಧಾರ ಮಾಡದೆ ತಾವು ಮಾತ್ರ ಉದ್ಧಾರವಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಪವರ್ ಇರುವುದೆಲ್ಲಾ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಲ್ಲಿ, ಮನಮೋಹನ್‌ಸಿಂಗ್ ಅವರು ಪ್ರಧಾನಿಯಾಗಿದ್ದರೂ, ಅದರ ಪವರ್ ಇದ್ದದ್ದು ಸೋನಿಯಾಗಾಂಧಿ, ರಾಹುಲ್ ಗಾಂಧಿಯವರಲ್ಲಿ. ಈಗ ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿದ್ದರೂ, ಅದರ ಪವರ್ ಇರುವುದೆಲ್ಲಾ ಸೋನಿಯಾಗಾಂಧಿ, ರಾಹುಲ್ ಗಾಂಧಿಯವರಲ್ಲಿ. ಹಾಗಾಗಿ ಖರ್ಗೆಯವರು ಪವರ್‌ಲೆಸ್ ನಾಯಕ. ಅವರೊಬ್ಬರು ರಬ್ಬರ್ ಸ್ಟಾಂಪ್ ನಾಯಕರಾಗಿದ್ದಾರೆ ಎಂದು ಲೇವಡಿ ಮಾಡಿದರು.
ಉತ್ತರ ಪ್ರದೇಶ ಹಾಗೂ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ದಲಿತರ ಕಲ್ಯಾಣಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅವರ ಬದುಕಿನಲ್ಲಿ ಹೊಸ ಭರವಸೆಗಳನ್ನು ಮತ್ತು ಸುರಕ್ಷತಾ ಭಾವನೆಯನ್ನು ಮೂಡಿಸಿದೆ. ಈ ಕಾರಣಕ್ಕೆ ಬಿಜೆಪಿ ಗೆಲುವು ಸಾಧಿಸಿದ ರಾಜ್ಯಗಳಲ್ಲಿ ದಲಿತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಬಂದಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಮೀಸಲಾತಿ ಹೆಚ್ಚಿಸುವ ಮೂಲಕ ಅವರ ಕಲ್ಯಾಣಕ್ಕೆ ಶ್ರಮಿಸಲಾಗಿದೆ. ಅದೇ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದಲಿತ ಮತಗಳನ್ನು ಸೆಳೆದು ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.
ವಿಧಾನಸಭೆ ಚುನಾವಣೆ ಜೊತೆ ಜೊತೆಗೆ 2024ಕ್ಕೆ ಎದುರಾಗುವ ಲೋಕಸಭೆ ಚುನಾವಣೆಗೂ ತಯಾರಿ ನಡೆಸಿಕೊಳ್ಳಬೇಕು. ಮುಂದಿನ ಒಂದು ವರ್ಷದ ಅವಧಿಯಲ್ಲಿ ಚುನಾವಣೆಗೆ ಏನೆಲ್ಲ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಕಾರ್ಯ ಯೋಜನೆ ರೂಪಿಸಿಕೊಂ ಡು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಬಿಜೆಪಿ ಸರ್ಕಾರ ದಲಿತ, ಶೋಷಿತ ಹಾಗೂ ಅವಕಾಶ ವಂಚಿತರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಕಾಂಗ್ರೆಸ್ ಏಳು ದಶಕಗಳ ಅವಧಿಯಲ್ಲಿ ಕೇವಲ ಸುಳ್ಳು ಭರವಸೆಗಳನ್ನು ನೀಡಿತ್ತೇ ಹೊರತು ಅವರ ಉನ್ನತಿಗೆ ಯಾವುದೇ ಕಾರ್ಯಕ್ರಮ ರೂಪಿಸಲಿಲ್ಲ. ಕಾಂಗ್ರೆಸ್‌ನ ಕೊಡುಗೆ ಏನು? ಕಾಂಗ್ರೆಸ್ ಕೇವಲ ದಲಿತರನ್ನು ರಾಜಕೀಯವಾಗಿ ಬಳಸಿಕೊಂಡಿದೆ. ಕಾಂಗ್ರೆಸ್ ದಲಿತ, ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಯಾಗಿದೆ ಎಂದು ಕಿಡಿಕಾರಿದರು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ದುಷ್ಯಂತ ಕುಮಾರ್ ಗೌತಮ್, ಕೇಂದ್ರ ಸಾಮಾಜಿಕ ನ್ಯಾಯ ಸಚಿವ ವೀರೇಂದ್ರ ಕುಮಾರ್, ಕೇಂದ್ರ ಅವಾಸ್ ಮಂತ್ರಿ ಕೌಶಲ್ ಕಿಶೋರ್, ಕೇಂದ್ರ ಸಚಿವ ಭಾನುಪ್ರತಾಪ್ ವರ್ಮ, ಎಸ್‌ಸಿ ಮೋರ್ಚಾ ರಾಷ್ಟ್ರೀಯ ಮಾಜಿ ಅಧ್ಯಕ್ಷ ಡಾ.ಸಂಜಯ್ ಪಾಸ್ವಾನ್, ರಾಮಪತಿ ಶಾಸ್ತ್ರಿ , ಮಾಜಿ ಸಂಸದ ನಾರಾಯಣ್ ಕೇಸರಿ, ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್,ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಹಾಜರಿದ್ದರು.