ಹೊಸದಿಗಂತ, ರಾಯಚೂರು:
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ 33 ಗ್ರಾ.ಪಂ.ಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ 32 ಪಿಡಿಒಗಳನ್ನು ಜಿ.ಪಂ ಸಿಇಒ ಅಮಾನತ್ತು ಮಾಡಿದ್ದಾರೆ.
ದೇವದುರ್ಗ ತಾಲೂಕಿನಲ್ಲಿ 2020-21 ಮತ್ತು 2022ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಜರುಗಿದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಸಕ್ತ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ 27 ಗ್ರಾಮ ಪಂಚಾಯತಿ ಪಿಡಿಒಗಳನ್ನು ಸೇವೆಯಿಂದ ಅಮಾನತ್ತುಗೊಳಿಸಿದ್ದಾರಲ್ಲದೆ ಬೇರೆ ಜಿಲ್ಲೆಗೆ ವರ್ಗಾವಣೆಗೊಂಡ ಐವರನ್ನು ಸೇವೆಯಿಂದ ವಜಾಗೊಳಿಸುವಂತೆ ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ ಆದೇಶಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿರುವ ದೂರು ದಾಖಲಾದ ಹಿನ್ನೆಲೆ ದೇವದುರ್ಗ ತಾಲೂಕಿನ 33 ಗ್ರಾ.ಪಂ.ಗಳಲ್ಲಿ ವಿಶೇಷ ಸಾಮಾಜಿಕ ಪರಿಶೋಧನೆಗೆ ಒಳಪಡಿಸಲಾಗಿತ್ತು. ಮಧ್ಯಂತರ ವರದಿಯಲ್ಲಿ ಕರ್ತವ್ಯಲೋಪ ಮತ್ತು ಹಣ ದುರುಪಯೋಗ ನಡೆದಿರುವುದು ಮೇಲ್ನೋಟಕ್ಕೆ ದೃಢಪಟ್ಟಿತ್ತು.
ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಕ್ರಮದಲ್ಲಿ ಭಾಗಿಯಾಗಿದ್ದ ಅಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನಿರ್ದೇಶಿಸಿದ್ದರು. ಮೇಲಾಕಾರಿಗಳ ನಿರ್ದೇಶನದ ಹಿನ್ನೆಲೆಯಲ್ಲಿ ಬುಧವಾರ ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆಯಿಂದ ದೂರು ದಾಖಲಿಸಲಾಗಿತ್ತು. ಈ ಹಿನ್ನಲೆಯಲ್ಲಿ ಪ್ರಸ್ತುತ 27 ಗ್ರಾ.ಪಂ.ಗಳ ಪಿಡಿಒಗಳನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ
ಇತ್ತೀಚೆಗೆ ಜಿಲ್ಲೆಯ ನೂರಾರು ಪಿಡಿಒಗಳು ವಿಶೇಷ ಸಾಮಾಜಿಕ ಪರಿಶೋಧನಾ ವರದಿಯೇ ಸರಿಯಾಗಿಲ್ಲ ಮತ್ತು ಅಮಾನತ್ತು ಆದೇಶವನ್ನು ಖಂಡಿಸಿ ಜಿಲ್ಲಾ ಕೇಂದ್ರ ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದ್ದರು. ಕೇವಲ ಪಿಡಿಒಗಳ ಮೇಲೆ ಮಾತ್ರ ಕ್ರಮಜರುಗಿಸುವುದು ಖಂಡನೀಯ. ಸಂಬಂಧಿಸಿದಂತೆ ಅಧ್ಯಕ್ಷರು ಹಾಗೂ ಮೇಲಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದರು.