ಹೊಸದಿಗಂತ ವರದಿ ಪುತ್ತೂರು:
ಪುತ್ತೂರಿನ ನಿವಾಸಿ ಅಭಿಷೇಕ್ ಎಂಬವರ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಎಂದು ಹೇಳಿಕೊಳ್ಳುತ್ತಿದ್ದ ಪಾಂಬಾರು ಪ್ರದೀಪ್ ರೈ ಎಂಬಾತ ಹಲ್ಲೆ ಮಾಡಿರುವ ಘಟನೆ ಗುರುವಾರ ಪುತ್ತೂರಿನಲ್ಲಿ ನಡೆದಿದೆ.
ನಗರದಿಂದ ಮುರಕ್ಕೆ ಸಂಚರಿಸುವ ಮಾರ್ಗ ಮಧ್ಯೆ ಇರುವ, ಪುತ್ತೂರು ಟಿಂಬರ್ ಶಾಪ್ ಬಳಿ ಅಭಿಷೇಕ್ ನಿಂತಿದ್ದ ಸಂದರ್ಭ ಪ್ರದೀಪ್ ರೈ ಅತೀ ವೇಗವಾಗಿ ಕಾರು ಚಲಾಯಿಸುತ್ತಾ ಬಂದಿದ್ದಾನೆ. ರಸ್ತೆ ಪಕ್ಕ ನಿಂತಿದ್ದ ಅಭಿಷೇಕ್ ಬಳಿ ಕಾರು ನಿಲ್ಲಿಸಿ ಅನಾವಶ್ಯಕವಾಗಿ ಬೈದು ಹಲ್ಲೆ ಮಾಡಿದ್ದಾನೆ. ‘ನಮ್ಮದೇ ಸರ್ಕಾರ ಇರೋದು, ಏನು ಬೇಕಾದ್ರೂ ಮಾಡ್ತವೆ. ನಿನ್ನನ್ನ ಸುಮ್ಮನೇ ಬಿಡೋದಿಲ್ಲ’ ಎಂದು ಬೆದರಿಕೆ ಹಾಕಿ ಸಾಯಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದರಿಂದ ಭಯಭೀತನಾದ ಅಭಿಷೇಕ್ ತನ್ನ ಸ್ನೇಹಿತರಿಗೆ ಕರೆ ಮಾಡಿ ವಿಚಾರವನ್ನು ತಿಳಿಸುತ್ತಿದ್ದಂತೆ ಸ್ಥಳದಿಂದ ಪ್ರದೀಪ್ ಕಾಲ್ಕಿತ್ತಿದ್ದಾನೆ ಎಂದು ತಿಳಿದು ಬಂದಿದೆ.
ಬಳಿಕ ಪುತ್ತೂರಿನ ಬೊಳುವಾರು ಬೈಪಾಸ್ನಲ್ಲಿ ಅಭಿಷೇಕ್ ಮತ್ತು ಆತನ ಸ್ನೇಹಿತರು ಪ್ರದೀಪ್ ರೈಯನ್ನು ನಿಲ್ಲಿಸಿ ಅಭಿಷೇಕ್ ಅವರಿಗೆ ಜೀವ ಬೆದರಿಕೆ ಹಾಕಿದ ವಿಚಾರವನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರದೀಪ್ ಗೂಂಡಾಗಿರಿ ಪ್ರದರ್ಶಿಸಿದ್ದು, ಇದರ ನಂತರ ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದೆ.
ಪ್ರದೀಪ್ ನಡೆಸಿದ ಹಲ್ಲೆಯಿಂದ ಗಾಯಗೊಂಡ ಅಭಿಷೇಕ್ ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಎಲ್ಲಾ ವಿಚಾರ ತಿಳಿಯುತ್ತಿದ್ದಂತೆ ಪ್ರದೀಪ್ ರೈ ಸುಳ್ಳು ಸುದ್ದಿ ಹಬ್ಬಿಸಿ ತನ್ನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಹಣ ಹಾಗೂ ಚಿನ್ನಾಭರಣ ದರೋಡೆ ಮಾಡಿದೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.
ಪುತ್ತೂರು ಮಾಜಿ ಶಾಸಕ ಸಂಜೀವ ಮಠ೦ದೂರು, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಹಿಂದೂ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಭಿಷೇಕ್ ಅವರ ಆರೋಗ್ಯ ವಿಚಾರಿಸಿ, ಸುಳ್ಳು ದೂರು ನೀಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.