ಹೊಸದಿಗಂತ ಡಿಜಿಟಲ್ ಡೆಸ್ಕ್ :
ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಪತ್ನಿಯನ್ನು ಹೊಡೆದು ಸಾಯಿಸಿರುವ ಘಟನೆ ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ತಾರಾಪುರ ಗ್ರಾಮದಲ್ಲಿ ನಡೆದಿದೆ.
ರಾಮಚಂದ್ರ ತುರಿ ಎಂಬಾತ ಈ ಹಿಂದೆ 11 ಮಹಿಳೆಯರನ್ನು ಮದುವೆಯಾಗಿದ್ದು, 12ನೇ ಪತ್ನಿಯನ್ನಾಗಿ ಸಾವಿತ್ರಿ ದೇವಿ ಅವರನ್ನು ವರಿಸಿದ್ದ. ಈ ದಂಪತಿಗೆ ಮೂರು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ.
ಭಾನುವಾರ ( ಏ. 2 ರಂದು) ಕುಡಿದು ಮನೆಗೆ ಬಂದಿದ್ದ ರಾಮಚಂದ್ರ ತುರಿ ಪತ್ನಿ ಸಾವಿತ್ರಿಯೊಂದಿಗೆ ಜಗಳವಾಡಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಪತಿ ಕೋಲಿನಿಂದ ಹೊಡೆದು ಪತ್ನಿಯನ್ನು ಸಾಯಿಸಿದ್ದಾನೆ.
ಸೋಮವಾರ ಈ ಘಟನೆ ಬೆಳಕಿಗೆ ಬಂದಿದ್ದು, ಗವಾನ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿಯನ್ನು ಬಂಧಿಸಿದ್ದಾರೆ.
ರಾಮಚಂದ್ರ ತುರಿ 11 ಮಹಿಳೆಯರನ್ನು ವಿವಾಹವಾಗಿದ್ದು, ಈತನ ದೈಹಿಕ ಹಿಂಸೆಯನ್ನು ತಾಳಲಾರದೇ ಅವರು ಆತನಿಂದ ದೂರವಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.