ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಮಾಲ್‌ನ ಮೂರನೇ ಫ್ಲೋರ್‌ನಿಂದ ಕೆಳಗೆ ಬಿದ್ದ 40 ವರ್ಷದ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಅಪಘಾತವೋ ಎಂಬ ನಿಖರ ಕಾರಣ ತಿಳಿದುಬಂದಿಲ್ಲ.
ಘಟನೆಯ ವಿವರ:
ಮೃತ ವ್ಯಕ್ತಿಯನ್ನು ಸದ್ಯಕ್ಕೆ 40 ವರ್ಷದವರು ಎಂದು ಗುರುತಿಸಲಾಗಿದ್ದು, ಅವರ ಹೆಸರು ಸೇರಿದಂತೆ ಇತರೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಕೆಪಿ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿ ಕಾಲು ಜಾರಿ ಬಿದ್ದಿದ್ದಾರೆಯೇ, ಉದ್ದೇಶಪೂರ್ವಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಮತ್ತು ಅವರು ಮಾಲ್‌ನ ಸಿಬ್ಬಂದಿಯೇ ಅಥವಾ ಗ್ರಾಹಕನೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಪ್ರತ್ಯಕ್ಷದರ್ಶಿಯೊಬ್ಬರು, “ಆ ವ್ಯಕ್ತಿಯು ಹೊರಗಿನಿಂದ ಬಂದಂತೆ ಕಾಣುತ್ತಿದ್ದರು ಮತ್ತು ಉದ್ದೇಶಪೂರ್ವಕವಾಗಿಯೇ ಮೂರನೇ ಫ್ಲೋರ್‌ನಿಂದ ಹಾರಿದ್ದಾರೆ. ಅವರ ಮುಖಕ್ಕೆ ಗಂಭೀರ ಗಾಯಗಳಾಗಿದ್ದವು. ಬಿದ್ದ ನಂತರ ಸುಮಾರು ಹತ್ತು ನಿಮಿಷಗಳ ಕಾಲ ಬದುಕಿದ್ದರು, ನಂತರ ಕೊನೆಯುಸಿರೆಳೆದರು” ಎಂದು ಮಾಹಿತಿ ನೀಡಿದ್ದಾರೆ.
ಮಾಹಿತಿ ಸಂಗ್ರಹಣೆಗೆ ತೊಡಕು:
ಸದ್ಯ ಮೃತದೇಹವನ್ನು ಆಂಬ್ಯುಲೆನ್ಸ್‌ಗೆ ಶಿಫ್ಟ್ ಮಾಡಲು ತಯಾರಿ ನಡೆದಿದ್ದು, ಮೃತರ ಬಳಿ ಯಾವುದೇ ಮೊಬೈಲ್, ಪರ್ಸ್ ಅಥವಾ ದಾಖಲೆಗಳು ಸಿಕ್ಕಿಲ್ಲ. ಈ ಕಾರಣದಿಂದ ಮೃತ ವ್ಯಕ್ತಿಯ ಗುರುತು ಪತ್ತೆ ಕಾರ್ಯ ಪೊಲೀಸರಿಗೆ ಸವಾಲಾಗಿದೆ.
ದುರಂತದ ಹಿನ್ನೆಲೆಯಲ್ಲಿ, ಮಾಲ್‌ನಲ್ಲಿ ನಿಗದಿಯಾಗಿದ್ದ ಬೆಳಗಿನ ಮೂವಿ ಶೋಗಳನ್ನು ರದ್ದುಗೊಳಿಸಲಾಗಿದೆ. ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.