ಹೊಸದಿಗಂತ ವರದಿ ಮಡಿಕೇರಿ:
ಕಾಡಾನೆ ದಾಳಿಗೆ ಸಿಲುಕಿ ಬೈಕ್ ಸವಾರನೊಬ್ಬ ಸಾವಿಗೀಡಾದ ಘಟನೆ ಶನಿವಾರ ಬೆಳ್ಳಂಬೆಳಗ್ಗೆ ಗೋಣಿಕೊಪ್ಪ ಸಮೀಪದ ಕೋಣನಕಟ್ಟೆ ಬಳಿ ನಡೆದಿದೆ. ಮೃತರನ್ನು ಕೋಣನಕಟ್ಟೆ ಮಾರಿಯಮ್ಮ ಕಾಲೋನಿಯ ಚಾಮು ಅಲಿಯಾಸ್ ಚಾಮಣ್ಣ ಎಂದು ಗುರುತಿಸಲಾಗಿದೆ.
ಶನಿವಾರ ಬೆಳಗ್ಗೆ 7ಗಂಟೆ ಸುಮಾರಿಗೆ ಕೋಣಕಟ್ಟೆಯಿಂದ ಮೂವರು ಯುವಕರು ಮರಪಾಲ ಮಾರ್ಗವಾಗಿ ತಿತಿಮತಿಯತ್ತ ತೆರಳುತ್ತಿದ್ದಾಗ ರಸ್ತೆಯಲ್ಲಿ ಕಾಡಾನೆ ಎದುರಾಗಿದೆ.
ಈ ಸಂದರ್ಭ ಹಿಂಬದಿಯಲ್ಲಿ ಕುಳಿತಿದ್ದ ಇಬ್ಬರು ಆನೆಯನ್ನು ಕಂಡು ಪಲಾಯನ ಮಾಡಿದ್ದು, ಬೈಕ್‌ನಲ್ಲಿದ್ದ ಚಾಮು ಅವರ ಮೇಲೆ ದಾಳಿ ಮಾಡಿದ ಕಾಡಾನೆ ಅವರನ್ನು ತುಳಿದು ಕೊಂದು ಹಾಕಿದೆ ಎನ್ನಲಾಗಿದೆ. ಶುಕ್ರವಾರ ಮುಂಜಾನೆ ದಕ್ಷಿಣ ಕೊಡಗಿನ ಬೀರುಗ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಬೆನ್ನಲ್ಲೇ ಇದೀಗ ಈ ದುರ್ಘಟನೆ ನಡೆದಿದೆ.
ಶುಕ್ರವಾರ ಬೆಳಗ್ಗೆ ಬೀರುಗ ಗ್ರಾಮದ ಹಾಲಪ್ಪ(58) ಎಂಬವರು ತೋಟಕ್ಕೆ ತೆರಳುತ್ತಿದ್ದಾಗ ಕಾಡಾನೆ ಅವರ ಮೇಲೆ ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.