ಹೊಸದಿಗಂತ ವರದಿ ಹಾವೇರಿ:
ಕೌಟುಂಬಿಕ ಕಲಹದ ಹಿನ್ನೆಲೆ ಅಣ್ಣನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಕೊಚ್ಚಿಕೊಲೆ ಮಾಡಿ ಮೈದುನ ಪರಾರಿಯಾದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ.
ಗೀತಾ ಮರಿಗೌಡ್ರು (32), ಅಕುಲ್ (10), ಅಂಕಿತಾ (7) ಕೊಲೆಯಾದ ದುರ್ದೈವಿಗಳು.
ಕುಮಾರಗೌಡ್ ಮರಿಗೌಡ್ರು (35) ಕೊಲೆ ಮಾಡಿ ಪರಾರಿಯಾದ ಆರೋಪಿ ಎಂದು ಗುರುತಿಸಲಾಗಿದೆ. ಈತನ ಸ್ವಂತ ಅಣ್ಣ ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಆತನ ಹೆಂಡತಿ ಮತ್ತು ಮಕ್ಕಳೇ ಹತ್ಯೆಗೀಡಾದವರು.
ಕಾಂಪ್ಲೆಕ್ಸ್ ಹಾಗೂ ವ್ಯಾಪಾರ ಸಂಬಂಧ ಅಣ್ಣ ಮತ್ತು ತಮ್ಮನ ನಡುವೆ ವೈಮನಸ್ಸು ಇದ್ದು ಕೊಲೆಯಲ್ಲಿ ಪರ್ಯವಸಾನ ಗೊಂಡಿದೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಡಾ.ಶಿವಕುಮಾರ ಮತ್ತು ಹಾನಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.