ಹೊಸದಿಗಂತ ಡಿಜಿಟಲ್ ಡೆಸ್ಕ್:
ವಂದೇ ಭಾರತ್ ರೈಲಿನಲ್ಲಿ ಶೌಚಾಲಯಕ್ಕೆಂದು ತೆರಳಿದ ವ್ಯಕ್ತಿ 6000 ರೂ ಕಳೆದುಕೊಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
ಕುಟುಂಬ ಸಮೇತ ಅಬ್ದುಲ್ ಎನ್ನುವವರು ಹೈದರಾಬಾದ್‌ನಿಂದ ಭೋಪಾಲ್‌ಗೆ ಆಗಮಿಸಿದ್ದರು. ಅಲ್ಲಿಂದ ಅವರು ತಮ್ಮ ಊರಾದ ಸಿಂಗ್ರೌಲಿಗೆ ತೆರಳಬೇಕಿತ್ತು. ಈ ವೇಳೆ ಮೂತ್ರ ವಿಸರ್ಜನೆಗಾಗಿ ವಂದೇ ಭಾರತ್ ರೈಲು ಹತ್ತಿ ಶೌಚಾಲಯಕ್ಕೆ ತೆರಳಿದ್ದಾರೆ. ಆದರೆ ಅವರು ಹೊರಬರುವ ವೇಳೆಗೆ ರೈಲಿನ ಸ್ವಯಂಚಾಲಿತ ಬಾಗಿಲು ಬಂದ್ ಆಗಿತ್ತು. ಆ ರೈಲು ಇಂದೋರ್ ಕಡೆಗೆ ತೆರಳುತ್ತಿತ್ತು. ಇದನ್ನು ಅವರು ಟಿಕೆಟ್ ಪರಿಶೀಲನೆ (ಟಿಸಿ) ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ರೈಲನ್ನು ಮಧ್ಯದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಿಕೆಟ್ ಇಲ್ಲದೇ ಪ್ರಯಾಣಿಸಿದ್ದಕ್ಕಾಗಿ ಅಬ್ದುಲ್ ಅವರಿಗೆ 1,020 ರೂ. ದಂಡ ವಿಧಿಸಲಾಯಿತು. ರೈಲು ಉಜ್ಜಯಿನಿಯಲ್ಲಿ ನಿಂತಿದೆ. ಅಲ್ಲಿಂದ ವಾಪಸು ಭೋಪಾಲ್‌ಗೆ ತೆರಳಲು ಬಸ್‌ನಲ್ಲಿ 750 ರೂ., ಸಿಂಗ್ರೌಲಿ ರೈಲು ತಪ್ಪಿದ ಕಾರಣ 4,000 ರೂ. ಮೊತ್ತದ ಟಿಕೆಟ್ ನಷ್ಟವಾಗಿದೆ.
ವಂದೇ ಭಾರತ್ ರೈಲಿನ ಶೌಚಾಲಯ ಬಳಸಿದಕ್ಕಾಗಿ ಅವರು ಒಟ್ಟು 6,000 ರೂ. ಕಳೆದುಕೊಂಡಿದ್ದಾರೆ. ಜತೆಗೆ ಅಬ್ದುಲ್ ಹಿಂತಿರುಗುವವರೆಗೂ ಅವರ ಪತ್ನಿ ಮತ್ತು ಮಗು ಸಂದಿಗ್ಧತೆ ಪರಿಸ್ಥಿತಿಯನ್ನು ಎದುರಿಸಬೇಕಾಯಿತು.