ಹೊಸದಿಗಂತ ವರದಿ ಹಾಸನ :
ಕುಡಿದ ಮತ್ತಿನಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿ ಜೊತೆಯಲ್ಲಿ ಇದ್ದವನು ಕಳ್ಳತನ ಮಾಡಲು ಬರಲ್ಲ ಎಂದು ನಿರಾಕರಿಸಿದ್ದಕ್ಕೆ ಚಾಕು ಇರಿದಿರುವ ಘಟನೆ ಹಾಸನ ನಗರದ ಎನ್.ಆರ್.ಸರ್ಕಲ್‌ನಲ್ಲಿ ನಡೆದಿದೆ.
ಚಿತ್ರದುರ್ಗ ಮೂಲದ ಚಿತ್ರಲಿಂಗೇಶ್ವರ ಅಲಿಯಾಸ್ ಶಿವಣ್ಣ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ. ಹೊಳೇನರಸೀಪುರ ತಾಲ್ಲೂಕಿನ, ಓಡನಹಳ್ಳಿ ಗ್ರಾಮದ ಚೇತು ಚಾಕುವಿನಿಂದ ಇರಿದ ಆರೋಪಿ. ನಗರದ ಸಿಟಿ ಬಸ್ ನಿಲ್ದಾಣದ ಬಳಿ ವಾಸವಿರುವ ಚಿತ್ರಲಿಂಗೇಶ್ವರ ಹಾಗೂ ಚೇತು ಇಬ್ಬರು ಗುಜರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು.
ಭಾನುವಾರ ಸಂಜೆ ವೇಳೆ ಹಾಸನ ನಗರದ ಎನ್.ಆರ್.ಸರ್ಕಲ್‌ನಲ್ಲಿರುವ ಬಾರ್‌ವೊಂದರಲ್ಲಿ ಇಬ್ಬರು ಮದ್ಯ ಸೇವಿಸುತ್ತಿದ್ದ ವೇಳೆ ಒಂದು ಕಡೆ ಕಬ್ಬಿಣವಿದೆ, ಇಬ್ಬರು ಸೇರಿ ಕಳ್ಳತನ ಮಾಡಿಕೊಂಡು ಬರೋಣ ಎಂದು ಚೇತು ಹೇಳಿದ್ದಾನೆ, ಕಳ್ಳತನಕ್ಕೆ ನಾನು ಬರುವುದಿಲ್ಲ ಎಂದು ಒಪ್ಪದ ಚಿತ್ರಲಿಂಗೇಶ್ವರನಿಗೆ ಸಿಟ್ಟಿಗೆದ್ದ ಚೇತು ತನ್ನ ಬಳಿಯಿದ್ದ ಚಾಕುವಿನಿಂದ ಇರಿದಿದ್ದಾನೆ.
ಚಿತ್ರಲಿಂಗೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.