ಸೈಬರ್‌ ಪೊಲೀಸರ ಹೆಸರಿನಲ್ಲಿ ವ್ಯಕ್ತಿಗೆ ಬೆದರಿಕೆ: ಲಕ್ಷಾಂತರ ರೂ. ಸುಲಿಗೆ ಮಾಡ್ತಿದ್ದ ಐವರು ಅರೆಸ್ಟ್‌

ಹೊಸದಿಗಂತ ವರದಿ ಮಡಿಕೇರಿ:

ಸೈಬರ್ ಪೊಲೀಸರ ಹೆಸರಿನಲ್ಲಿ ವ್ಯಕ್ತಿಯೊಬ್ಬರನ್ನು ಬೆದರಿಸಿ,‌ ಲಕ್ಷಾಂತರ ರೂ.ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕನ ಸಹಿತ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಡಿಕೇರಿ‌ ತಾಲೂಕಿನ ಬೋಯಿಕೇರಿ ಹಾಲೇರಿ‌ ನಿವಾಸಿ ಇಬ್ರಾಹಿಂ ಬಾದ್ ಷಾ (25), ಪಾಂಡವಪುರ ತಾಲೂಕಿನ ಮೇಲುಕೋಟೆ ಬಳಿಘಟ್ಟ ಗ್ರಾಮದ ರಾಘವೇಂದ್ರ ಬಿ.ಎಂ, (19) , ಇಬ್ರಾಹಿಂ ಬಾದ್‌ಷಾನ ಪತ್ನಿ, ಬೆಂಗಳೂರಿನ ಬನಶಂಕರಿ ನಿವಾಸಿ ಸಂಗೀತಾ(30),ಕುಶಾಲನಹರ ಆದರ್ಶ ದ್ರಾವಿಡ ಕಾಲೋನಿಯ ಚರಣ್.ಸಿ.ಕೆ (19) ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಲ್ಲದೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ‌ ನಾಲ್ಕು ಮೊಬೈಲ್’ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ವಿವರ: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ಗ್ರಾಮದ ನಿವಾಸಿ ಪರಶಿವಮೂರ್ತಿ ಎಂಬವರು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್‌ಬಕ್‌ನಲ್ಲಿ
ಯಾರೋ ಒಬ್ಬರಿಗೆ ಮೇಸೆಜ್/ಕಮೆಂಟ್ ಮಾಡಿದ್ದರೆನ್ನಲಾಗಿದೆ.

ಅಪರಿಚಿತ ವ್ಯಕ್ತಿಯು ನ.2ರಂದು ಪರಶಿವಮೂರ್ತಿಯಬರ ಮೊಬೈಲ್ ಸಂಖ್ಯೆಗೆ ಕರೆಮಾಡಿ ತಾನು ಪಿರಿಯಾಪಟ್ಟಣ ಸೈಬರ್ ಪೊಲೀಸ್ ಎಂದು ಪರಿಚಯಿಸಿಕೊಂಡು ‘ನೀವು ಹುಡುಗಿಯರಿಗೆ ಸಾಮಾಜಿಕ ಜಾಲತಾಣದಲ್ಲಿ ಮೇಸೆಜ್/ಕಮೆಂಟ್ ಮಾಡಿ ಟಾರ್ಚರ್ ನೀಡಿರುವ ಕುರಿತು ದೂರು ದಾಖಲಾಗಿದೆ. ನೀವು ಹಣ ನೀಡಿದರೆ ಸರಿ ಮಾಡುತ್ತೇನೆ. ಇಲ್ಲವಾದಲ್ಲಿ ಮನೆಯ ಬಳಿ ಬಂದು ಕರೆದುಕೊಂಡು ಹೋಗಿ ಜೈಲಿಗೆ ಹಾಕುತ್ತೇನೆ ಹಾಗೂ ಅಕ್ಕ-ಪಕ್ಕದವರ ಮನೆಯ ಮುಂದೆ ನಿನ್ನ ಮಾನ ಮರ್ಯಾದೆ ಹೋಗುವಂತೆ ಮಾಡುತ್ತೇನೆ ಎಂದು ಹಲವು ಬಾರಿ ಹೆದರಿಸಿ ಸುಮಾರು ರೂ.7 ಲಕ್ಷ ರೂ.ಗಳನ್ನು ಪಡೆದಿರುವುದಾಗಿ ಹೇಳಲಾಗಿದೆ.

ಈ ಸಂಬಂಧವಾಗಿ ಜ.11ರಂದು ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪರಶಿವಮೂರ್ತಿಯವರು ನೀಡಿದ ದೂರಿನ ಅನ್ವಯ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ: 318(2), 319(1), 308(2) ಬಿಎನ್‌ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆ ಹಾಗೂ ಆರೋಪಿಗಳ ಪತ್ತೆಗಾಗಿ ಸೋಮವಾಪೇಟೆ ಉಪ ವಿಭಾಗದ ಡಿವೃಎಸ್ಪಿ ಪಿ.ಚಂದ್ರಶೇಖರ್, ಕುಶಾಲನಗರ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್.ಬಿ.ಜಿ, ಪಿಎಸ್ಐ ಗೀತಾ ಹಾಗೂ ಠಾಣಾ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು.

ಈ ತಂಡವು ಮಾಹಿತಿ ಸಂಗ್ರಹಿಸಿ ಮಂಗಳವಾರ ಐವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!