ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಕೆಟ್ ಇಲ್ಲದೆಯೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಶೌಚಾಲಯದಲ್ಲಿ ಸಿಗರೇಟ್ ಸೇದುವ ವೇಳೆ ರೈಲ್ವೆ ಪೊಲೀಸ್ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ ಘಟನೆ ಹೈದರಬಾದ್ ನಲ್ಲಿ ನಡೆದಿದೆ.
ಆಂಧ್ರಪ್ರದೇಶದ ತಿರುಪತಿಯಿಂದ ಸಿಕಂದರಾಬಾದ್ ಗೆ ತೆರಳುತ್ತಿದ್ದ ರೈಲಿಗೆ ವ್ಯಕ್ತಿಯೊಬ್ಬ ಟಿಕೆಟ್ ಇಲ್ಲದೆ ಹತ್ತಿದ್ದಾನೆ. ಬಳಿಕ ಆತ ಶೌಚಾಲಯದೊಳಗೆ ಹೋಗಿ ಚಿಲಕ ಹಾಕಿಕೊಂಡು ಸಿಗರೇಟ್ ಸೇದಿದ್ದಾನೆ. ಇದರಿಂದ ಆತ ಪೇಚೆಗೆ ಸಿಲುಕಿದ್ದಾನೆ.
ಫ್ಲ್ಯಾಗ್‌ಶಿಪ್ ರೈಲಿನಲ್ಲಿ ಅಳವಡಿಸಲಾದ ಫೈರ್ ಅಲಾರಂಗಳ ಬಗ್ಗೆ ತಿಳಿಯದೆ ಆತ ಶೌಚಾಲಯಕ್ಕೆ ಹೋಗಿ ಸಿಗರೇಟ್ ಸೇದಿದ್ದಾನೆ.
ಆಗ ಎಮರ್ಜೆನ್ಸಿ ಅಲಾರಂ ಸದ್ದು ಮಾಡಿದೆ. ಇದರಿಂದ ಗಾಬಾರಿಗೊಂಡ ಪ್ರಯಾಣಿಕರು ತಕ್ಷಣ ರೈಲ್ವೆ ಪೊಲೀಸರಿಗೆ ತುರ್ತು ಕರೆ ಮಾಡಿದ್ದಾರೆ. ಹೀಗಾಗಿ ರೈಲು ಮನುಬುಲು ನಿಲ್ದಾಣದ ಬಳಿ ನಿಂತಿದೆ.
ಬಳಿಕ ರೈಲ್ವೆ ಪೊಲೀಸ್ ಸಿಬ್ಬಂದಿ ಅಗ್ನಿಶಾಮಕ ಯಂತ್ರದೊಂದಿಗೆ ಕಾರ್ಯಚರಣೆ ನಡೆಸಿ ಶೌಚಾಲಯದ ಗಾಜು ಹೊಡೆದು ಒಳ ನುಗ್ಗಿ ಧೂಮಪಾನ ಮಾಡಿದ ಪ್ರಯಾಣಿಕನನ್ನು ಬಂಧಿಸಿದ್ದಾರೆ.