ಹೊಸದಿಗಂತ ಡಿಜಿಟಲ್ ಡೆಸ್ಕ್:
ಮ್ಯಾಟ್ರಿಮೋನಿ ಮೂಲಕ ವರನ ಅನ್ವೇಷಣೆ ಮಾಡುವವರು ಒಮ್ಮೆ ಈ ಸುದ್ದಿಯನ್ನು ಓದಲೇಬೇಕು. ವ್ಯಕ್ತಿಯೊಬ್ಬ ಬರೋಬ್ಬರಿ 15 ಮದುವೆಯಾಗಿ ಚಿನ್ನಭಾರಣ ದೋಚಿದ್ದು, ಇದೀಗ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮ್ಯಾಟ್ರಿಮೋನಿಯಲ್ಲಿ ವಿಧೆಯರು, ಅವಿವಾಹಿತರಿಗೆ ಗಾಳ ಹಾಕಿ ಬರೋಬ್ಬರಿ 15 ಮಹಿಳೆಯರ ಜೊತೆಗೆ ಮದುವೆಯಾಗಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಭೂಪನನ್ನು ಮೈಸೂರಿನ ಕುವೆಂಪು ನಗರದ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬನಶಂಕರಿ ನಿವಾಸಿ ಮಹೇಶ್ ಎಂಬಾತ ಮ್ಯಾಟ್ರಿ ಮೋನಿಯಲ್ಲಿ ಮದುವೆಯಾಗಿ ಬಳಿಕ ಮಹಿಳೆಯರಿಂದ ಹಣ, ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, 2 ಲಕ್ಷ ರೂ.ನಗದು, 2 ಕಾರ್, 7 ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಮಹೇಶ್ ಮೈಸೂರಿನ ನಿವಾಸಿ ಹೇಮಲತಾ ಎಂಬುವರಿಗೆ ತಾನು ಡಾಕ್ಟರ್ ಎಂದು ಹೇಳಿಕೊಂಡು ಮೋಸ ಮಾಡಿ ಮದುವೆ ಮಾಡಿಕೊಂಡಿದ್ದ. ಬಳಿಕ ಆರೋಪಿಯ ಬಣ್ಣ ಬಯಲಾಗಿದ್ದು, ಹೇಮಲತಾ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿ ಮಹೇಶನನ್ನು ಅರೆಸ್ಟ್ ಮಾಡಿದ್ದಾರೆ. ಇದೀಗ ಆತ ಸುಮಾರು 15 ಮಹಿಳೆಯರನ್ನು ಮದುವೆಯಾಗಿ ಅವರೆಲ್ಲರಿಗೂ ಕೈಕೊಟ್ಟಿರುವ ಸಂಗತಿ ಬಯಲಾಗಿದೆ.