ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ದಾಳಿ ಮಾಡಿದ ಉಗ್ರರಿಗೆ ಊಟ-ಆಶ್ರಯ ನೀಡಿ ನೆರವು ನೀಡಿದ್ದ ವ್ಯಕ್ತಿಯೊಬ್ಬ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ಹೋಗಿ, ನದಿಗೆ ಹಾರಿ ಮುಳುಗಿ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ.
ಇಮ್ತಿಯಾಜ್ ಅಹ್ಮದ್ ಮಾಗ್ರೆ ಎಂಬ 23 ವರ್ಷದ ವ್ಯಕ್ತಿ, ಪಹಲ್ಗಾಮ್ ದಾಳಿಕೋರರಿಗೆ ಸಕಲ ನೆರವು ನೀಡುತ್ತಿದ್ದ ಎಂದು ಮೂಲಗಳು ಖಚಿತಪಡಿಸಿವೆ.
ಕೆಲ ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಮ್ತಿಯಾಜ್ ಅಹ್ಮದ್ ಮಾಗ್ರೆನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಇಮ್ತಿಯಾಜ್ ತಾನು ಕಾಡಿನಲ್ಲಿ ಅಡಗಿದ್ದ ಭಯೋತ್ಪಾದಕರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದ.
ಇದರಂತೆ ಪೊಲೀಸರು ಇಮ್ತಿಯಾಜ್‌ನನ್ನು ಭಯೋತ್ಪಾದಕರು ಅಡಗಿದ್ದ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದಾಗ, ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ನದಿಗೆ ಹಾರಿದ್ದು, ತುಂಬ ದೂರ ಈಜಲಾಗದೇ, ಮುಳುಗಿ ಮೃತಪಟ್ಟಿದ್ದಾನೆಂದು ಭದ್ರತಾ ಪಡೆಗಳು ತಿಳಿಸಿವೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎತ್ತರದ ಪ್ರದೇಶದಿಂದ ಸೆರೆಹಿಡಿಯಲಾದ ವೀಡಿಯೊದಲ್ಲಿ, ಆರೋಪಿ ನದಿಗೆ ಹಾರುವ ಮೊದಲು ಅರಣ್ಯ ಪ್ರದೇಶವನ್ನು ಗಮನಿಸುತ್ತಿರುವುದು, ನದಿಗೆ ಹಾರಿದ ತಕ್ಷಣ, ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿರುವುದು ಕಂಡು ಬಂದಿದೆ. ಇದೀಗ ಈ ಘಟನೆ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ತನಿಖೆಗೆ ಒತ್ತಾಯಗಳೂ ಕೇಳಿ ಬರುತ್ತಿವೆ.