ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ರೋಚಕ ತಿರುವು ಪಡೆದುಕೊಂಡಿದ್ದು, ಕ್ರಿಕೆಟ್ ಪ್ರೇಮಿಗಳು ಕೊನೆಯ ದಿನದಾಟದತ್ತ ಕಣ್ಣುಹಾಯಿಸಿದ್ದಾರೆ. 311 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ, ನಾಲ್ಕನೇ ದಿನದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಇನ್ನೂ 137 ರನ್ ಹಿನ್ನಡೆಯಲ್ಲಿದೆ.
ಕಾಲ್ಬೆರಳಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್, ಪಂದ್ಯದ ನಿರ್ಣಾಯಕ ದಿನದಲ್ಲಿ ಮತ್ತೆ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ ಎಂಬ ಸುದ್ದಿ ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಪಂತ್ ಅವರ ಕಾಲಿಗೆ ಚೆಂಡು ಬಡಿದು ಗಾಯವಾಗಿತ್ತು. ಪಂತ್ ತೀವ್ರ ನೋವಿನಿಂದ ಬಳಲುತ್ತಿದ್ದರೂ 54 ರನ್ ಸಿಡಿಸಿದ್ದಾರೆ.
ಬಿಸಿಸಿಐ ಮೂಲಗಳ ಪ್ರಕಾರ, ತುರ್ತು ಸಂದರ್ಭ ಬಂದರೆ ಪಂತ್ ಪ್ಯಾಡ್ ಹಾಕಿಕೊಂಡು ಮೈದಾನಕ್ಕಿಳಿಯಲು ಸಿದ್ಧರಾಗಿದ್ದಾರೆ. ಅವರ ತೀವ್ರ ಗಾಯದ ಕುರಿತು ಸ್ಕ್ಯಾನ್ ಮಾಡಲಾಗಿದ್ದು, ವೈದ್ಯಕೀಯ ಸಲಹೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.
ಇನ್ನು, ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲಿಗೆ ತಡೆ ನೀಡಲು ಬಲವಾದ ಬ್ಯಾಟಿಂಗ್ ಪ್ರದರ್ಶನ ನೀಡಬೇಕಾಗಿದ್ದು, ಕೊನೆಯ ದಿನದಾಟದಲ್ಲಿ ಎಲ್ಲರ ಕಣ್ಣೂ ಪಂತ್ ಮೇಲೆ ನೆಟ್ಟಿದೆ.