ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬರ್ಥದ ಸುತ್ತೋಲೆಯನ್ನು ಹೊರಡಿಸಿದ್ದ ರಾಜ್ಯ ಸರ್ಕಾರ (Karnataka Government) ಇದೀಗ ಆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ತಿದ್ದುಪಡಿ ಆದೇಶ ಹೊರಡಿಸಿದೆ.
ತಿದ್ದುಪಡಿ ಆದೇಶದಲ್ಲೇನಿದೆ?
ಎಲ್ಲಾ ಶಾಲೆಗಳಲ್ಲಿ (ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ) ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳು ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂಬುದಾಗಿ ತಿದ್ದುಪಡಿ ಆದೇಶದಲ್ಲಿ ಸರ್ಕಾರ ಉಲ್ಲೇಖಿಸಿದೆ.
ಸರ್ಕಾರದ ಹಿಂದಿನ ಆದೇಶಕ್ಕೆ ವಿಪಕ್ಷ ಬಿಜೆಪಿ ಸದನದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದೇ ವೇಳೆ ಸ್ಪಷ್ಟೀಕರಣ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮುದ್ರಣ ದೋಷದ ಕಾರಣ ನೀಡಿದರು. ಇದನ್ನು ಒಪ್ಪದ ವಿಪಕ್ಷ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಸದನದಲ್ಲಿ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ತೀವ್ರ ಜಟಾಪಟಿ ನಡೆಯಿತು.