ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ನಂತರ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಬರೆದು ಎಚ್ಚರಿಸಿದ್ದಾರೆ: “ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿ ಅಮಾಯಕರನ್ನು ಪ್ರಚೋದಿಸುತ್ತಿರುವುದು ಈಗಾಗಲೇ ಗಮನಕ್ಕೆ ಬಂದಿದೆ. ಇಂತಹ ಸುದ್ದಿಗಳನ್ನು ಕೇಳಿದ ಕೂಡಲೇ ಆಪಾದನೆ ಮಾಡದೆ ತ್ವರೆಯಾಗಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವ ತೀವ್ರವಾದ ಕ್ರಮವನ್ನು ಯಾರೂ ತೆಗೆದುಕೊಳ್ಳಬಾರದು.
ರಾಜ್ಯದಲ್ಲಿ ಅಹಿತಕರ ಘಟನೆ ನಡೆದರೆ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಈ ಹೇಳಿಕೆಯು ಶಾಂತಿಯನ್ನು ಸಾಧಿಸುವ ಭರವಸೆಗಿಂತ ಬೆದರಿಕೆ ಮತ್ತು ಪ್ರಚೋದನಕಾರಿ ಧ್ವನಿಯನ್ನು ಹೊಂದಿದೆ. ಸರ್ಕಾರಕ್ಕೆ ತನ್ನ ಕರ್ತವ್ಯದ ಅರಿವಿದೆ. ತಪ್ಪಿದರೆ ಕಾನೂನು ನೋಡಿಕೊಳ್ಳುತ್ತದೆ ಎಂದರು.
ಬಿಜೆಪಿಯ ಕೆಲವು ಶಾಸಕರು ಮತ್ತು ಸಂಸದರು ಈಗಾಗಲೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಗಮನಿಸಿದೆ. ಇಂತಹವರ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷರು ಕಠಿಣ ಕ್ರಮ ಕೈಗೊಂಡರೆ ಕಾನೂನು ಸುವ್ಯವಸ್ಥೆ ಕಾಪಾಡುವ ಸರ್ಕಾರದ ಕಾರ್ಯ ಸುಲಭವಾಗಲಿದೆ ಎಂದರು.