ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಂಡೌಸ್ ಚಂಡಮಾರುತವು ಮುಂದಿನ 12 ಗಂಟೆಗಳಲ್ಲಿ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಪರಿಣಾಮ ಎಪಿ, ತೆಲಂಗಾಣ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಎಪಿಯ ರಾಯಲಸೀಮಾ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತೆಲಂಗಾಣದ ಹಲವೆಡೆ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದು, ಜನರು ಜಾಗೃತರಾಗಿರುವಂತೆ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತದ ಪ್ರಭಾವದಿಂದಾಗಿ ಎಪಿಯಲ್ಲಿನ ಹಳ್ಳ-ಕೊಳ್ಳ ಹೊಳೆಗಳು ತುಂಬಿ ಹರಿಯುತ್ತಿವೆ.
ಸೋಮಶಿಲಾ ಯೋಜನೆಗೆ ಪ್ರವಾಹದ ಹರಿವು ಕ್ರಮೇಣ ಹೆಚ್ಚುತ್ತಿದೆ. ಪೆನ್ನಾ ನದಿಗೆ 40 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಡಪ ಜಿಲ್ಲೆಯ ಪ್ರದ್ದೂರು, ಚಾಪರು, ರಾಜುಪಾಳಂ, ಖಾಜಿಪೇಟೆ, ಪೆದ್ದಮುಡಿಯಂ ಮಂಡಲಗಳಲ್ಲಿ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಚಿತ್ತೂರು ಜಿಲ್ಲೆಯಲ್ಲಿ 250 ಎಕರೆ ಬೆಳೆ ಹಾನಿಯಾಗಿದ್ದು, 149 ಕಂಬಗಳು ಕುಸಿದಿವೆ. ತಗ್ಗು ಪ್ರದೇಶಗಳಿಂದ 388 ಜನರನ್ನು ಪುನರ್ವಸತಿ ಕೇಂದ್ರಗಳಿಗೆ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ.
ತಿರುಪತಿ ಜಿಲ್ಲೆಯಲ್ಲಿ 3 ಸಾವಿರ ಎಕರೆ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 150 ಮನೆಗಳಿಗೆ ಹಾನಿಯಾಗಿದ್ದು, 360 ವಿದ್ಯುತ್ ಕಂಬಗಳು ಬಿದ್ದಿವೆ. ತಿರುಪತಿ ಜತೆಗೆ ನೆಲ್ಲೂರು ಜಿಲ್ಲೆಯಲ್ಲೂ ಭಾರಿ ಮಳೆಯಾಗಿದೆ. ಇದರಿಂದ ವೆಂಕಟಗಿರಿ-ರಾವೂರು ನಡುವೆ ಸಂಚಾರ ಸ್ಥಗಿತಗೊಂಡಿದೆ.