ಹೊಸದಿಗಂತ ವರದಿ ಮಂಡ್ಯ :
ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವುಗೊಳಿಸಿರುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ಬಂದ್ ಸಂಪೂರ್ಣ ವಿಫಲವಾಯಿತು. ಕೇವಲ ರ‍್ಯಾಲಿಗಷ್ಟೇ ಸೀಮಿತವಾಗಿತ್ತು.
ಕೆರಗೋಡು ಗ್ರಾಮದ ರಂಗಮೈದಾನದಲ್ಲಿ ಸ್ಥಾಪಿಸಿದ್ದ 108 ಅಡಿ ಧ್ವಜಸ್ಥಂಭದಲ್ಲಿ ಹಾರಿಸಲಾಗಿದ್ದ ಶ್ರೀ ಹನುಮಧ್ವಜವನ್ನು ತೆರವುಗೊಳಿಸಿದ ಸರ್ಕಾರ, ರಾಷ್ಟ್ರ ಧ್ವಜವನ್ನು ಹಾರಿಸಿತ್ತು. ಮತ್ತೆ ಹನುಮಧ್ವಜ ಹಾರಿಸುವಂತೆ ಗ್ರಾಮಸ್ಥರು ಹಾಗೂ ಹಿಂದೂ ಕಾರ‌್ಯಕರ್ತರು ಒತ್ತಾಯ ಮಾಡಿದ್ದವು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಡ್ಯ ಹಾಗೂ ಕೆರಗೋಡು ಬಂದ್‌ಗೆ ಕರೆ ನೀಡಲಾಗಿತ್ತು.
ಶ್ರೀರಾಮ ಭಜನಾ ಮಂಡಳಿ ಹಾಗೂ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಬಂದ್ ವಿಫಲವಾಗಿದ್ದು, ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿಗೆ ಮಾತ್ರ ಸೀಮಿತವಾಗಿತ್ತು. ಕೆರಗೋಡು ಗ್ರಾಮದಲ್ಲಿ ಬಂದ್ ಯಶಸ್ವಿಯಾಗಿದೆ.
ಶಾಲಾ-ಕಾಲೇಜುಗಳು, ಚಿತ್ರಮಂದಿರಗಳು, ದಿನಸಿ ಅಂಗಡಿಗಳು ಸೇರಿದಂತೆ ಇನ್ನಿತರೆ ವಾಣಿಜ್ಯ ಚಟುವಟಿಕೆಗಳು ಎಂದಿನಂತೆ ಕಾರ‌್ಯ ನಿರ್ವಹಿಸಿದ್ದವು. ಜಿಲ್ಲಾ ವಾಣಿಜ್ಯ ಮಂಡಳಿ ಬಂದ್ ಬೆಂಬಲಿಸುವುದಿಲ್ಲ ಎಂದು ಹೇಳಿದ್ದ ಕಾರಣ ವರ್ತಕರು ಅಂಗಡಿಗಳನ್ನು ಬಂದ್ ಮಾಡದೆ ವ್ಯಾಪಾರ ವಹಿವಾಟು ನಡೆಸಿದರು.
ಆಟೋ, ಕಾರುಗಳು, ಬಸ್ಸುಗಳ ಸಂಚಾರ ಎಂದಿನಂತಿತ್ತು. ಯಾವುದೇ ಚಟುವಟಿಕೆಗಳಿಗೂ ತೊಂದರೆಯಾಗಲಿಲ್ಲ. ನಗರದಲ್ಲಿ ಎಲ್ಲವೂ ಸಹಜ ಸ್ಥಿತಿಯಲ್ಲೇ ಮುಂದುವರಿದಿದ್ದು ಕಂಡುಬಂತು.