August 23, 2026
Sunday, August 23, 2026
spot_img

ಮಂಡ್ಯ: ಭಿಕ್ಷಾಟನೆ ಮಾಡುತ್ತಿದ್ದ ವೃದ್ಧ ಮಹಿಳೆ ಮನೆಯಲ್ಲಿ ಲಕ್ಷಾಂತರ ರೂಪಾಯಿ ಪತ್ತೆ

ಹೊಸದಿಗಂತ ವರದಿ ಮಂಡ್ಯ:

ಭಿಕ್ಷಾಟನೆಯಿಂದಲೇ ಸಂಪಾದನೆ ಮಾಡಿದ್ದ ಲಕ್ಷ ಲಕ್ಷ ಹಣ ವೃದ್ದ ಮಹಿಳೆಯ ಮನೆಯಲ್ಲಿ ತಡವಾಗಿ ಪತ್ತೆಯಾಗಿದೆ.

ನಗರದ ಗುತ್ತಲು ಬಡಾವಣೆಯ ಸಬ್ದರಿಯಾ ಮೊಹಲ್ಲಾದ ನಿವಾಸಿ ಹೂರ್ (70) ಎಂಬಾಕೆಯ ಮನೆಯಲ್ಲಿ ಪತ್ತೆಯಾಗಿರುವುದು ತಡವಾಗಿ ವರದಿಯಾಗಿದೆ.

ಹೂರ್ ಎಂಬ ಮಹಿಳೆ ಚಿಕ್ಕಂದಿನಿಂದಲೂ ಭಿಕ್ಷೆ ಬೇಡಿಯೇ ಜೀವನ ನಡೆಸುತ್ತಿದ್ದರು. ಈಕೆಯ ಸಹೋದರರು ಬೆಂಗಳೂರಿಗೆ ವಲಸೆ ಹೋಗಿದ್ದರು. ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದರು. ಈಕೆ ಒಬ್ಬಳೇ ಮನೆಯಲ್ಲಿ ವಾಸವಾಗಿದ್ದು, ಭಿಕ್ಷೆ ಬೇಡಿಕೆಯೇ ಜೀವನ ನಡೆಸುತ್ತಿದ್ದಳು.

ಕಳೆದ ಬುಧವಾರ ವಯೋಸಹಜ ಖಾಯಿಲೆಯಿಂದ ಆಕೆ ಮನೆಯಲ್ಲೇ ಸಾವನ್ನಪ್ಪಿದ್ದಾಳೆ. ಬೆಳಗ್ಗೆ ತುಂಬಾ ಹೊತ್ತಾದರೂ ಈಕೆ ಬಾಗಿಲು ತೆರೆಯದಿರುವುದನ್ನು ಕಂಡ ಅಕ್ಕ ಪಕ್ಕದ ನಿವಾಸಿಗಳು ನೋಡಿದ್ದಾರೆ. ಆಕೆ ಸಾವನ್ನಪ್ಪಿರುವುದನ್ನು ತಿಳಿದು ಬೆಂಗಳೂರಿನಲ್ಲಿ ವಾಸವಾಗಿದ್ದ ಆಕೆಯ ಸಹೋದರ ಫಾಜೀಲ್ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮತ್ತೊಬ್ಬ ಸಹೋದರ ಅಬ್ಬಾಸ್ ಎಂಬಾತನೂ ಬೆಂಗಳೂರಿನಲ್ಲೇ ಇದ್ದರಾದರೂ. ಕಳೆದ ಕೆಲ ವರ್ಷಗಳ ಹಿಂದೆ ಸಾವನಪ್ಪಿದ್ದರೆನ್ನಲಾಗಿದೆ. ಅವರ ಮಕ್ಕಳು ಕುಟುಂಬದವರು ಬಂದು ಮೃತ ದೇಹದ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ.

ನಂತರ ಕುಟುಂಬದವರು ಮನೆಗೆ ಬಂದು ಪರಿಶೀಲನೆ ನಡೆಸಿದ ವೇಳೆ ಚೀಲಗಳಲ್ಲಿ ಚಿಲ್ಲರೆ ಹಣ ಹಾಗೂ ನೋಟಿನ ಕಂತೆಗಳನ್ನು ಕಟ್ಟಿ ಇಟ್ಟಿರುವುದು ಬೆಳಕಿಗೆ ಬಂದಿದೆ. ಇದನ್ನು ಕಂಡ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅಕ್ಕ ಪಕ್ಕದವರಿಗೂ ವಿಷಯ ತಿಳಿದು ಎಲ್ಲರೂ ದೌಡಾಯಿಸಿದ್ದಾರೆ. ಕೊನೆಗೆ ಎಲ್ಲ ಹಣವನ್ನು ಲೆಕ್ಕ ಮಾಡಿದಾಗ 8.40 ಲಕ್ಷ ರೂ. ಪತ್ತೆಯಾಗಿತ್ತು.

ಇದನ್ನೂ ಓದಿ:

ಬಡಾವಣೆಯ ಹಿರಿಯರ ಸಲಹೆಯಂತೆ ಆಕೆಯ ಸಹೋದರರ ಎರಡೂ ಕುಟುಂಬಗಳಿಗೆ ಸಮನಾಗಿ ಹಂಚಿಕೆ ಮಾಡಲಾಯಿತು. ಒಟ್ಟಾರೆ ಭಿಕ್ಷುಕಿ ಮನೆಯಲ್ಲಿ ಲಕ್ಷ ಲಕ್ಷ ಹಣ ಪತ್ತೆಯಾಗಿರುವುದನ್ನು ಕಂಡು ಬಡಾವಣೆಯ ನಿವಾಸಿಗಳೇ ಅಚ್ಚರಿಪಟ್ಟಿದ್ದಾರೆ. ಇದ್ದಾಗ ಯಾರು ನೋಡಲಿಲ್ಲ, ಈಗ ಭಿಕ್ಷಾಟನೆಯ ಹಣ ಹಂಚಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ. ಈ ಘಟನೆ ಮಂಡ್ಯದ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರೂ ಸಹ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅವರ ಕುಟಂಬದವರೇ ಹಣ ಹಂಚಿಕೆ ಮಾಡಿರುವುದು ಮತ್ತು ಯಾವುದೇ ದೂರು ದಾಖಲಾಗದಿರುವುದರಿಂದ ವಾಪಸ್ಸಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !