ವರುಣನ ಆರ್ಭಟಕ್ಕೆ ಮಂಗಳೂರು-ಬೆಂಗಳೂರು ರಸ್ತೆ ಸಂಪರ್ಕ ಕಡಿತ: ಹೆಚ್ಚುವರಿ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರಾವಳಿ, ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಈ ಹಿನ್ನೆಲೆ ಮಂಗಳೂರು-ಉಡುಪಿ ಭಾಗಗಳ ಜನತೆಗೆ ಬೆಂಗಳೂರಿನ ಸಂಪರ್ಕ ಕಡಿತಗೊಂಡಿದೆ.

ಗುಡ್ಡ ಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಹೀಗಾಗಿ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಬರೆದ ಪತ್ರಕ್ಕೆ ರೈಲ್ವೇ ಇಲಾಖೆ ಸ್ಪಂದನೆ ನೀಡಿದೆ. ಬೆಂಗಳೂರು-ಮಂಗಳೂರು ಮಧ್ಯೆ ಹೆಚ್ಚುವರಿ ರೈಲು ಓಡಿಸಲು ಆದೇಶಿಸಲಾಗಿದೆ.

ಶಿರಾಡಿ ಘಾಟ್ ಸಂಪೂರ್ಣ ಬಂದ್ ಆಗಿದ್ದು, ಮಡಿಕೇರಿ ಹೆದ್ದಾರಿ ರಾತ್ರಿ ವೇಳೆ ಬಂದ್ ಮಾಡಲಾಗಿದೆ. ಸದ್ಯ ಏಕೈಕ ತೆರೆದಿರುವ ಚಾರ್ಮಾಡಿ ಹೆದ್ದಾರಿಯಲ್ಲಿಯೂ ಭಾರೀ ಟ್ರಾಫಿಕ್ ಜಾಂ ಇದೆ.

ಈ ಹಿನ್ನೆಲೆ, ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ರೈಲ್ವೇ ಇಲಾಖೆಗೆ ಮಂಗಳೂರು-ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಪತ್ರ ಬರೆದಿದ್ದಾರೆ.

ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಮತ್ತು ಮೈಸೂರು ಡಿಆರ್‌ಎಮ್ ಅವರಿಗೆ ಕಳುಹಿಸಿದ ಈ ಪತ್ರಕ್ಕೆ ಸ್ಪಂದನೆ ಸಿಕ್ಕಿದ್ದು, ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಪ್ರಾರಂಭಿಸಲು ಆದೇಶಿಸಲಾಗಿದೆ.

ರೈಲ್ವೆ ಇಲಾಖೆಯು ನಾಲ್ಕು ದಿನಗಳ ಕಾಲ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಹಾಗೂ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲನ್ನು ನೀಡಿ ಆದೇಶ ನೀಡಿದೆ.

ರಸ್ತೆ ಸಂಪರ್ಕ ಕಡಿತದಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ವಿಶೇಷ ರೈಲನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಜನರ ಅವಶ್ಯಕತೆಗಳನ್ನು ಪರಿಗಣಿಸಿ ಮುಂದುವರಿಸಲಾಗುವುದು. ಈ ವಿಶೇಷ ರೈಲುಗಳ ಓಡಾಟ ಹೆಚ್ಚುವರಿ ಪ್ರಯಾಣಿಕರ ಸಂಚಾರದ ಒತ್ತಡವನ್ನು ಕಡಿಮೆ ಮಾಡಲಿದ್ದು, ಪ್ರಯಾಣಿಕರು ಅನುಕೂಲಕರವಾಗಿ ಪ್ರಯಾಣಿಸಬಹುದಾಗಿದೆ.

ವಿಶೇಷ ರೈಲುಗಳ ವಿವರ:
ಜು. 19ರಂದು ರೈಲು ಸಂಖ್ಯೆ 06547 ಎಸ್‌ಬಿಸಿ ಬೆಂಗಳೂರಿನಿಂದ ಹೊರಡಲಿದೆ.
ಜು.20ರಂದು ರೈಲು ಸಂಖ್ಯೆ 06548 ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳಲಿದೆ.
ಜು.21 ಹಾಗೂ 22ರಂದು ರೈಲು ಸಂಖ್ಯೆ 06549 ಯಶವಂತಪುರದಿಂದ ಮಂಗಳೂರು ಜಂಕ್ಷನ್‌ಗೆ ಬರಲಿದೆ.
ಜು.21 ಹಾಗೂ 22 ರಂದು ರೈಲು ಸಂಖ್ಯೆ 06550 ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!