ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಹೊರವಲಯದ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಂದ ಕದ್ದಿದ್ದ 18.314 ಕೆಜಿ ಚಿನ್ನ ಮತ್ತು 3.80 ಲಕ್ಷ ರೂ. ನಗದನ್ನು ಮಂಗಳೂರು ನಗರ ಪೊಲೀಸ್ ತಂಡ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಆರು ತಿಂಗಳ ಹಿಂದೆಯೇ ದರೋಡೆಗೆ ಸಂಚು ರೂಪಿಸಲಾಗಿತ್ತು ಮತ್ತು ಬ್ಯಾಂಕ್ ಬಳಿ ಮೂರು ಬಾರಿ ಪರಿಶೀಲನೆ ನಡೆಸಲಾಗಿತ್ತು ಎಂದು ತಿಳಿಸಿದರು.
ಬಂಧಿತ ಆರೋಪಗಳಾದ ಮುರುಗನ್ ಮತ್ತು ಕಣ್ಣನ್ ಮಣಿ ಆರು ತಿಂಗಳ ಹಿಂದೆಯೇ ತಲೋಜಾ ಜೈಲಿನಲ್ಲಿ ಭೇಟಿಯಾಗಿದ್ದಾಗ ಈ ಬ್ಯಾಂಕ್ ದರೋಡೆಗೆ ಸಂಚು ರೂಪಿಸಿದ್ದರು. ಇನ್ನೂ ಪರಾರಿಯಾಗಿರುವ ಸ್ಥಳೀಯ ಸಹಚರ ಶಶಿ ತೇವರ್ ಸಹ ಈ ಸಂಚಿನಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಿದರು.
ಮಂಗಳೂರು ಮೂಲದ ಶಶಿ ತೇವರ್ ಆರು ತಿಂಗಳ ಹಿಂದೆ ಕೋಟೆಕಾರ ವ್ಯವಸಾಯ ಸಹಕಾರಿ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿ ಕೊರತೆ ಹಾಗೂ ದರೋಡೆಗೆ ಸೂಕ್ತವಾದ ಬ್ಯಾಂಕ್ ಎಂಬುದನ್ನು ತಿಳಿಸಿದ್ದ. 2024ರ ಆಗಸ್ಟ್, ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಮುರುಗನ್, ಮಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾನೆ. ಶುಕ್ರವಾರ ಮಧ್ಯಾಹ್ನ ಸೂಕ್ತ ದಿನವೆಂದು ನಿರ್ಧರಿಸಿ ಜ. 17ರಂದು ದರೋಡೆ ಕೃತ್ಯ ಎಸಗಿದ್ದಾರೆ ಎಂದು ಆಯುಕ್ತರು ವಿವರಿಸಿದರು.
ದರೋಡೆಕೋರರು ಒಟ್ಟು 18.674 ಕೆಜಿ ಚಿನ್ನಾಭರಣ ಹಾಗೂ 11,67,044 ರೂ.ಗಳನ್ನು ದೋಚಿದ್ದರು. ಮಂಗಳೂರು ಪೊಲೀಸರು ತಮಿಳುನಾಡು ಹಾಗೂ ಮುಂಬೈಯ ಪೊಲೀಸರ ಸಹಕಾರದಲ್ಲಿ ನಡೆಸಿದ ಕಾರ್ಯಾಚರಣೆಯ ವೇಳೆ 18.314 ಕೆ.ಜಿ. ಚಿನ್ನ, 3,80,500 ರೂ. ನಗದು ವಪಡಿಸಿಕೊಂಡಿದ್ದಾರೆ. ಜತೆಗೆ 2 ಪಿಸ್ತೂಲ್, 3 ಸಜೀವ ಗುಂಡುಗಳು, ಫಿಯೆಟ್ ಕಾರು, ಒಂದು ನಕಲಿ ನಂಬರ್ ಪ್ಲೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಎಸಿಪಿಗಳಾದ ಧನ್ಯಾ ಮತ್ತು ಮನೋಜ್ ನೇತೃತ್ವದಲ್ಲಿ ಮಂಗಳೂರು ಪೊಲೀಸರ ಹಲವು ತಂಡಗಳು ತಮಿಳುನಾಡು ಮತ್ತು ಮುಂಬೈನಲ್ಲಿ ಸತತ ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದು, 2700 ಕಿ.ಮೀ. ಅಧಿಕ ಪ್ರಯಾಣ ಬೆಳೆಸಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ತಿರುವಣ್ಣಮಲೈನಲ್ಲಿ 36 ವರ್ಷದ ಕಣ್ಣನ್ ಮಣಿಯನ್ನು ಬಂಧಿಸಲಾಗಿದ್ದು, ಅಂಬಾ ಸಮದ್ರುಮಮ್ ನಿಂದ 36 ವರ್ಷದ ಮುರುಗನ್ ಡಿ. ತೇವರ್ ಮತ್ತು ಯೋಶ್ವ ರಾಜೇಂದ್ರನ್ ನನ್ನು ಬಂಧಿಸಲಾಗಿದ್ದು, ಜನವರಿ 23 ರಂದು 65 ವರ್ಷದ ಎಂ. ಷಣ್ಮುಗ ಸುಂದರನ್(ಮುರುಗನ್ ಅವರ ತಂದೆ)ರನ್ನು ಬಂಧಿಸಲಾಗಿದೆ.