ಹೊಸದಿಗಂತ ವರದಿ,ಮಂಗಳೂರು:
ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರೋಡ್ ನಡುವಿನ ವಿಸ್ತರಿತ ಪ್ಯಾಸೆಂಜರ್ ರೈಲು ಪ್ರಯಾಣಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ನಗರದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಶನಿವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವ ಸೋಮಣ್ಣ, ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು ರೈಲನ್ನು ಸುಬ್ರಹ್ಮಣ್ಯ ರೋಡ್ ಗೆ ವಿಸ್ತರಣೆ ಮಾಡುವ ಮೂಲಕ ಈ ಭಾಗದ ಜನತೆಯ ಬೇಡಿಕೆಯನ್ನು ಈಡೇರಿಸಲಾಗಿದೆ. ಇದರಿಂದ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗಲಿದೆ.ಮುಂದಿನ ಒಂದೂವರೆ ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಭೋಗಿಗಳು ಬರಲಿದ್ದು, ಮಂಗಳೂರಿಗೂ ಒಂದು ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಒದಗಿಸಲಾಗುವುದು ಎಂದರು.
ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾರ್ಯ ೧೯ ಕೋಟಿ ರೂ.ಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ಶೇ. ೮೫ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆಗಸ್ಟ್ನೊಳಗೆ ಸಂಪೂರ್ಣ ಕಾಮಗಾರಿ ಮುಕ್ತಾಯವಾಗಲಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಮಾಸ್ಟರ್ ಪ್ಲಾನ್ ತಯಾರಾಗಿದ್ದು, ಟೆಂಡರ್ ಕರೆದು ಎರಡು ವರ್ಷಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.
ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ , ಸಂಸದ ಬ್ರಿಜೇಶ್ ಚೌಟ , ಶಾಸಕರಾದ ವೇದವ್ಯಾಸ ಕಾಮತ್ , ಡಾ. ವೈ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಬಾಲಕೃಷ್ಣ ಭಟ್, ಮೋನಪ್ಪ ಭಂಡಾರಿ, ರೈಲ್ವೆ ಡಿಆರ್ಎಂ ಅರುಣ್ ಕುಮಾರ್ ಚತುರ್ವೇದಿ ಉಪಸ್ಥಿತರಿದ್ದರು.