ಹೊಸದಿಗಂತ ವರದಿ, ಮಂಗಳೂರು:
ಕಳೆದ ಮೂರು ವರ್ಷಗಳಲ್ಲಿ ಇಂಧನ ಬೆಲೆ ಕಡಿಮೆಯಾದ ಜಗತ್ತಿನ ಏಕೈಕ ರಾಷ್ಟ್ರ ಭಾರತ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್‌ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ಲಿಟ್ ಫೆಸ್ಟ್‌ನಲ್ಲಿ ಶನಿವಾರ ‘ಎನರ್ಜಿ ಫಾರ್ ಸರ್ವೈವಲ್-ಸೊಸೈಟಿ ಆಂಡ್ ಕ್ಲೈಮೇಟ್ ಡಿಬೇಟ್’ ವಿಷಯದ ಕುರಿತಂತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ದೇಶದಲ್ಲಿ ಒಟ್ಟು 140 ಮಿಲಿಯನ್ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ. ಶೇಕಡಾ 67ರಷ್ಟು ಜನರು ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಪಡೆಯುತ್ತಿದ್ದು, ವರ್ಷಕ್ಕೆ 260 ರಿಂದ 270 ಮಿಲಿಯನ್ ಮೆಟ್ರಿಕ್‌ಟನ್ ಇಂಧನ ಸಂಸ್ಕರಣೆ ಸಾಮರ್ಥ್ಯ ಹೊಂದಲಾಗಿದೆ. ಬ್ರೆಜಿಲ್ 3 ಮಿಲಿಯನ್ ಬ್ಯಾರೆಲ್ ಪ್ರತಿದಿನ ಉತ್ಪಾದನೆ ಮಾಡುತ್ತಿದೆ. ಸುರಿನಾಮ್, ಗಯಾನಾ, ಕೆನಡಾ ಕೂಡ ಕಚ್ಚಾತೈಲ ಉತ್ಪಾದನೆ ಮಾಡುತ್ತಿವೆ ಎಂದರು.
ಅಭಿವೃದ್ಧಿ ಪಥದಲ್ಲಿರುವ ಭಾರತ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಶಾಲಿ ರಾಷ್ಟ್ರವಾಗುವತ್ತ ದಾಪುಗಾಲಿಕ್ಕುತ್ತಿದೆ. ಈ ಸಂದರ್ಭದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಾದ್ದು ಅತ್ಯವಶ್ಯಕ ಎಂದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದಾಗ ಗೃಹಬಳಕೆಗೆ 14 ಕೋಟಿ ಎಲ್‌ಪಿಜಿ ಸಂಪರ್ಕವಿತ್ತು. ಕಳೆದ 10 ವರ್ಷಗಳಲ್ಲಿ ಈ ಸಂಖ್ಯೆ 33.3 ಕೋಟಿಗೆ ಏರಿಕೆಯಾಗಿದೆ. ಆರ್ಥಿಕ ಬೆಳವಣಿಗೆಯಿಂದ ಜನರ ಜೀವನ ಮಟ್ಟ ಹೆಚ್ಚಾಗುತ್ತಿದೆ. ತಲಾ ಆದಾಯ ಹೆಚ್ಚಾಗಬೇಕು. 2047ರ ವೇಳೆಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಬೇಕು. ಆಗ ತಾನಾಗಿಯೇ ತಲಾ ಆದಾಯ ಹೆಚ್ಚಲಿದೆ ಎಂದು ಹರ್‌ದೀಪ್ ಸಿಂಗ್ ಪುರಿ ವಿಶ್ಲೇಷಿಸಿದರು.
ಭಾರತದಲ್ಲಿ ಶೇ 67ರಷ್ಟು ಮಂದಿ ವಾಹನಗಳಿಗೆ ಇಂಧನ ಬಳಕೆ ಮಾಡುತ್ತಾರೆ. ಭಾರತಕ್ಕೆ ಪ್ರತಿದಿನ 6 ರಿಂದ 7 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ದಿನಕ್ಕೆ ಬೇಕಾಗುತ್ತದೆ. 20 ವರ್ಷಗಳ ದೂರಾಲೋಚನೆಯೊಂದಿಗೆ ಇಂಧನ ಭದ್ರತೆಯ ಯೋಜನೆಗಳನ್ನು ರೂಪಿಸಬೇಕಾಗಿದೆ. ಜಗತ್ತಿನ ಒಟ್ಟಾರೆ ಇಂಧನ ಬೇಡಿಕೆಯ ಶೇ 25 ರಷ್ಟು ಭಾರತದಿಂದಲೇ ಬರುತ್ತದೆ. ಈ ಇಂಧನದ ಬಳಕೆ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಲಿದೆ. ಭವಿಷ್ಯದ ಬೇಡಿಕೆಗಳನ್ನು ಪೂರೈಸಲು ಈಗಿನಿಂದಲೇ ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ ಎಂದು ಹರ್‌ದೀಪ್ ಸಿಂಗ್ ಪುರಿ ಹೇಳಿದರು.