ಹೊಸದಿಗಂತ ವರದಿ, ಮಂಗಳೂರು:
‘ಬಾಂಗ್ಲಾದೇಶದಲ್ಲಿ ಹಿಂದುಗಳ ಹತ್ಯೆ ಆಗುತ್ತಿರುವುದನ್ನು ಕೇಂದ್ರ ಸರ್ಕಾರ ಸುಮ್ಮನೆ ನೋಡುತ್ತಾ ಕೂರಬಾರದು, ಈ ಕುರಿತು ತಕ್ಷಣ ಕ್ರಮ ತೆಗೆದುಕೊಳ್ಳಬೇಕು’ ಎಂದು ದಿ ಪ್ರಿಂಟ್ ಪತ್ರಿಕೆಯ ಸಲಹಾ ಸಂಪಾದಕಿ ಹಾಗೂ ಓಪಿ ಜಿಂದಾಲ್ ಶಿಕ್ಷಣ ಸಂಸ್ಥೆಯ ಅಸೋಸಿಯೇಟ್ ಪ್ರೊಫೆಸರ್ ಡಾ. ಸ್ವಸ್ತಿ ರಾವ್ ಹೇಳಿದರು.
ಮಂಗಳೂರು ಲಿಟ್ ಫೆಸ್ಟ್ ೮ನೇ ಆವೃತ್ತಿಯ ಎರಡನೇ ದಿನವಾದ ಭಾನುವಾರ ನಡೆದ ನೆರೆಹೊರೆ ರಾಷ್ಟ್ರಗಳ ಸವಾಲುಗಳು ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಸಂಬಂಧಗಳ ಕುರಿತು ಮಾತನಾಡಿದರು.
‘ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆತಂಕಕಾರಿಯಾಗಿದೆ. ೧೯೭೧ರಲ್ಲಿ ಬಾಂಗ್ಲಾದೇಶದಲ್ಲಿ ಬಹಳ ಸಮಸ್ಯೆ ಉದ್ಭವವಾದಾಗ, ಭಾರತ ಮಧ್ಯೆ ಪ್ರವೇಶಿಸಿ ಜನರ ರಕ್ಷಣೆಗೆ ಮುಂದಾಗಿತ್ತು. ಆದರೆ ಈಗ ಮತ್ತೆ ಅಲ್ಲಿ ಹಿಂದುಗಳ ಹತ್ಯೆಯಾಗುತ್ತಿದೆ. ಹಿಂದು ಹತ್ಯೆಗಳ ವಿಚಾರವಾಗಿ ಭಾರತ ಸರ್ಕಾರ ಏನಾದರೂ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
‘ಭಾರತವು ಎಲ್ಲಾ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿದೆ. ಅಮೇರಿಕಾ, ರಷ್ಯಾ, ಯೂರೋಪಿಯನ್ ಯೂನಿಯನ್, ಆಫ್ರಿನ್ ಯೂನಿಯನ್ ಹೀಗೆ ಎಲ್ಲರೊಂದಿಗೆ ಒಳ್ಳೆಯ ಸಂಬಂಧ ಹೊಂದಿದೆ. ಇನ್ನು, ನೆರೆ ರಾಷ್ಟ್ರಗಳ ಬಗ್ಗೆ ಹೇಳುವುದಾದರೆ, ಎಲ್ಲಾ ದೇಶಗಳಿಗೆ ಸಾಕಷ್ಟು ಸಹಾಯಹಸ್ತ ಚಾಚಿದೆ. ಆ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ದೊಡ್ಡ ರೀತಿಯಲ್ಲಿ ಬೆಂಬಲವಾಗಿ ನಿಲ್ಲಬೇಕು ಮತ್ತು ನಿಲ್ಲಲಿವೆ’ ಎಂದು ಹೇಳಿದರು.

