ಹೊಸದಿಗಂತ ವರದಿ ಶಿವಮೊಗ್ಗ:
ನವುಲೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಏ.26 ರಿಂದ 28 ರವರೆಗೆ ವೈವಿಧ್ಯಮಯ ಹಣ್ಣು ಮತ್ತು ಆಹಾರ ಮೇಳ ಆಯೋಜಿಸಲಾಗಿದೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಮೂರು ದಿನಗಳ ಕಾಲ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಈ ಮೇಳ ಜರುಗಲಿದೆ. ವೈವಿಧ್ಯಮಯ ಮಾವಿನ ಹಣ್ಣುಗಳು, ಹಲಸು, ಬಾಳೆ ಹಾಗೂ ವಿವಿಧ ಜಾತಿಯ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ ಎಂದರು.
30 ವಿಶಿಷ್ಟ ಮಾವಿನ ತಳಿಗಳಾದ ಆಲ್ಫಾನ್ಸೋ, ಬಾದಾಮಿ, ಕೇಸರ್, ಮಲಗೋವಾ, ಮಲ್ಲಿಕಾ, ನೀಲಂ, ರಸಪುರಿ, ಸಿಂಧೂರ, ತೋತಾಪುರಿ, ಅಪ್ಪೆ ಮಿಡಿ ತಳಿಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. 20 ವಿವಿಧ ಹಲಸಿನ ತಳಿಗಳಾದ ಸಿದ್ದು ಹಲಸು, ಶಂಕರ, ಸರ್ವಋತು, ರುದ್ರಾಕ್ಷಿ. ಕೆಂಪು, ಚಂದ್ರ ಹಲಸು, ಹೆಬ್ಬಾಳ ಸೇರಿದಂತೆ ಸಖರಾಯಪಟ್ಟಣದ ಸ್ಥಳೀಯ ವಿಶೇಷ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮತ್ತು ವಿವಿಧ ತಳಿಯ ಬಾಳೆ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ ಎಂದರು.
ಬಿಜಾಪುರ, ಬಾಗಲಕೋಟೆ ಮತ್ತಿತರ ಭಾಗಗಳಿಂದ ಥಾಮ್ಸನ್ ಸೀಡ್‌ಲೆಸ್, ಶರದ್, ಕೃಷ್ಣ ಶರದ್ ಇತ್ಯಾದಿ ತಳಿಯ ದ್ರಾಕ್ಷಿ ಹಣ್ಣುಗಳು ಆಗಮಿಸುತ್ತಿವೆ. ಬೆಂಗಳೂರು ಗ್ರಾಮಾಂತರ ಭಾಗದಿಂದ ಬೆಂಗಳೂರು ಬ್ಲೂ ದ್ರಾಕ್ಷಿ ಬರಲಿದೆ. ಹೀಗಾಗಿ ದ್ರಾಕ್ಷಿ ಪ್ರಿಯರಿಗೆ ಬಗೆ ಬಗೆಯ ಹಣ್ಣುಗಳು ಲಭಿಸಲಿವೆ ಎಂದರು.