ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಮಾವು ಕೃಷಿಕರು ಪ್ರಸ್ತುತ ಕಟಾವು ಋತುವಿನಲ್ಲಿ ಮಾರುಕಟ್ಟೆ ಏರಿಳಿತದಿಂದಾಗಿ ತೊಂದರೆಯನ್ನು ಅನುಭವಿಸುತ್ತಿದ್ದು, ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಪತ್ರ ಬರೆದು, ವಿನಂತಿಸಿದ್ದಾರೆ.
ರಾಜ್ಯದಲ್ಲಿ ಮಾವು ಅತಿದೊಡ್ಡ ತೋಟಗಾರಿಕಾ ಬೆಳೆಯಾಗಿದ್ದು, ಈ ಬಾರಿ ಒಂದು ಲಕ್ಷ 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಈ ಹಂಗಾಮಿನಲ್ಲಿ 8 ರಿಂದ 10 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆಯನ್ನು ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಲ್ಲೇ ನಿರೀಕ್ಷೆ ಮಾಡಲಾಗಿದೆ. ಪ್ರಾರಂಭದಲ್ಲಿ ಕ್ವಿಂಟಾಲ್ಗೆ 12 ಸಾವಿರ ರೂಪಾಯಿಯಿದ್ದ ಬೆಲೆ ಈಗ 3 ಸಾವಿರ ರೂಪಾಯಿಗೆ ಇಳಿದಿದೆ. ಮಾವು ಉತ್ಪಾದನೆಯ ಖರ್ಚು ಕ್ವಿಂಟಾಲ್ಗೆ 5 ಸಾವಿರ ರೂಪಾಯಿಗಿಂತಲೂ ಹೆಚ್ಚಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಪತ್ರದಲ್ಲಿ ತಿಳಿಸಿದ್ದಾರೆ.
ಕೇಂದ್ರ ಸಂಸ್ಥೆಗಳಾದ ನೆಫೆಡ್, ಹಾಗೂ ಎನ್ಸಿಸಿಎಫ್ಗಳ ಮುಖಾಂತರ ಮಾವು ಖರೀದಿಸುವ ಮೂಲಕ ಕೇಂದ್ರ, ರಾಜ್ಯದ ರೈತರ ಹಿತ ಕಾಪಾಡಬೇಕೆಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.