ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಸಚಿವರ ಮನೆಗೆ ಬೆಂಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಂತರಿಕ ಕಲಹದಿಂದ ಪ್ರಕ್ಷುಬ್ಧಗೊಂಡಿರುವ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿದೆ. ಮಣಿಪುರದ ಇಂಫಾಲ್ ಪಶ್ಚಿಮದಲ್ಲಿ ಸಚಿವೆ ನೆಮ್ಚಾ ಕಿಪ್‌ಗೆನ್ ಅವರ ನಿವಾಸವನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದರು. ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ ಕಾಂಗ್ಪೋಕ್ಪಿ ಜಿಲ್ಲೆಯ ಖಮೆನ್ಲೋಕ್ ಪ್ರದೇಶದ ಹಳ್ಳಿಯೊಂದರಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದಾಗ ಒಂಬತ್ತು ಜನರು ಸಾವನ್ನಪ್ಪಿ, ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಖಮೆನ್ಲೋಕ್ ಗ್ರಾಮದಲ್ಲಿ ದುಷ್ಕರ್ಮಿಗಳು ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ತಮೆಂಗ್ಲಾಂಗ್ ಜಿಲ್ಲೆಯ ಗೋಬಜಾಂಗ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಹಲವರು ಗಾಯಗೊಂಡಿದ್ದು, ಮಣಿಪುರದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಭದ್ರತಾ ಸಿಬ್ಬಂದಿ ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ ಪೊಲೀಸರು ತೆಂಗ್ನೌಪಾಲ್ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳಿಂದ ಬಂದೂಕುಗಳು ಮತ್ತು 63 ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದುವರೆಗೆ ಒಟ್ಟು 1,040 ಶಸ್ತ್ರಾಸ್ತ್ರಗಳು, 13,601 ಮದ್ದುಗುಂಡುಗಳು ಮತ್ತು 230 ಬಗೆಯ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಣಿಪುರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಹೇಳಿದ್ದಾರೆ. ಅಧಿಕಾರಿಗಳು ಇಂಫಾಲ್ ಪೂರ್ವ ಜಿಲ್ಲೆ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಕರ್ಫ್ಯೂ ಸಡಿಲಿಕೆಯ ಸಮಯವನ್ನು ಬೆಳಿಗ್ಗೆ 5 ರಿಂದ ಸಂಜೆ 6 ರವರೆಗೆ ಕಡಿಮೆ ಮಾಡಿದ್ದಾರೆ. ಮಣಿಪುರದ 16 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಇಡೀ ಈಶಾನ್ಯ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!