ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರಿ ಸಿನಿಮಾ ‘ಬೂಂಗ್’ ಸಿನಿಮಾ ಪ್ರತಿಷ್ಠಿತ ಭಾಫ್ಟಾ ಪ್ರಶಸ್ತಿ ಗೆದ್ದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಿನಿಮಾದ ತಾಂತ್ರಿಕ ವರ್ಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಲಂಡನ್‌ನಲ್ಲಿ ನಡೆದ ಪ್ರತಿಷ್ಠಿತ ಬಾಫ್ಟಾ (BAFTA) ಪ್ರಶಸ್ತಿ ಸಮಾರಂಭದಲ್ಲಿ ‘ಅತ್ಯುತ್ತಮ ಮಕ್ಕಳ ಮತ್ತು ಕೌಟುಂಬಿಕ ಚಿತ್ರ’ ವಿಭಾಗದಲ್ಲಿ ‘ಬೂಂಗ್’ ಸಿನಿಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಬೂಂಗ್ ಮಣಿಪುರಿ ಸಿನಿಮಾವನ್ನು ಲಕ್ಷ್ಮಿಪ್ರಿಯಾ ದೇವಿ ನಿರ್ದೇಶನ ಮಾಡಿದ್ದು, ವಿಶೇಷವೆಂದರೆ ಇದು ಅವರ ಮೊಟ್ಟ ಮೊದಲ ಸಿನಿಮಾ.
ಬಾಲಿವುಡ್ ನಟ ಮತ್ತು ನಿರ್ದೇಶಕ ಫರ್ಹಾನ್ ಅಖ್ತರ್ ಅವರ ಜೊತೆಗೆ ರಿತೇಶ್ ಸಿಧ್ವಾನಿ, ವಿಕೇಶ್ ಭುತಾನಿ, ಅಲನ್ ಮೆಕ್ ಅಲೆಕ್ಸ್ ಮತ್ತು ಶುಜಾತ್ ಸೌದಾಗರ್ ಅವರುಗಳ ನಿರ್ಮಾಣ ತಂಡದಲ್ಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಹ ‘ಬೂಂಗ್’ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದು, ‘ಈ ಸಿನಿಮಾದೊಂದಿಗೆ ಗುರುತಿಸಿಕೊಂಡಿರುವ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಇದು ನಿಜಕ್ಕೂ ಅಪಾರ ಸಂತೋಷದ ಕ್ಷಣ, ಅದರಲ್ಲೂ ವಿಶೇಷವಾಗಿ ಮಣಿಪುರಕ್ಕೆ ಹೆಮ್ಮೆಯ ವಿಷಯ. ಇದು ನಮ್ಮ ದೇಶದಲ್ಲಿರುವ ಅಗಾಧ ಸೃಜನಶೀಲ ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ’ ಎಂದಿದ್ದಾರೆ.
ಈ ಚಿತ್ರವು ಮಣಿಪುರದ ಶಾಲಾ ಬಾಲಕ ಬೂಂಗ್ನ ಸುತ್ತ ಸುತ್ತುತ್ತದೆ. ಜನಾಂಗೀಯ ಸಂಘರ್ಷ ಮತ್ತು ಗಡಿಭಾಗದ ಸವಾಲುಗಳ ನಡುವೆ, ತನ್ನ ಒಡೆದು ಹೋದ ಕುಟುಂಬವನ್ನು ಮತ್ತೆ ಒಂದುಗೂಡಿಸಲು ಆತ ನಡೆಸುವ ಸಾಹಸಮಯ ಮತ್ತು ಭಾವನಾತ್ಮಕ ಪ್ರಯಾಣವನ್ನು ಈ ಸಿನಿಮಾ ಕಟ್ಟಿಕೊಡುತ್ತದೆ.



