September 15, 2026
Tuesday, September 15, 2026
spot_img

ನೀನೇ ಕಾಪಾಡಪ್ಪ…ತಂದೆ | ಮ್ಯಾಚ್ ಗೂ ಮುನ್ನ ತಿಮ್ಮಪ್ಪನ ಮೊರೆ ಹೋದ RCB ಕ್ಯಾಪ್ಟನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರಲ್ಲಿ ಭರ್ಜರಿ ಆರಂಭ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ರಜತ್ ಪಾಟಿದಾರ್ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಶನಿವಾರ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ನಂತರ, ಆರ್‌ಸಿಬಿ ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಇದೇ ಹಿನ್ನೆಲೆ ಏಪ್ರಿಲ್ 5ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಇಬ್ಬರು ಆಟಗಾರರು ಶ್ರೀವಾರಿ ಆಶೀರ್ವಾದ ಪಡೆದರು.

ಇದನ್ನೂ ಓದಿ:

ಕಳೆದ ಸೀಸನ್‌ನಲ್ಲಿ ಚೊಚ್ಚಲ ಐಪಿಎಲ್ ಕಿರೀಟ ಗೆದ್ದಿದ್ದ ಆರ್‌ಸಿಬಿ, ಈ ಬಾರಿಯೂ ಅದೇ ಜೋರನ್ನು ಮುಂದುವರಿಸುವತ್ತ ಗಮನ ಹರಿಸಿದೆ. ತಿರುಮಲ ದರ್ಶನದ ಮೂಲಕ ತಂಡದ ಪ್ರಮುಖ ಆಟಗಾರರು ಆಧ್ಯಾತ್ಮಿಕ ನೆಮ್ಮದಿಯ ಜೊತೆಗೆ ಮಹತ್ವದ ಪಂದ್ಯಕ್ಕೆ ಸಜ್ಜಾಗಿದ್ದಾರೆ ಎಂಬ ಮಾತುಗಳು ಅಭಿಮಾನಿಗಳಲ್ಲಿ ಕೇಳಿಬರುತ್ತಿವೆ.

ವಿಶೇಷವೆಂದರೆ, ಕಳೆದ ವರ್ಷವೂ ಆರ್‌ಸಿಬಿ ತಂಡದ ಕೆಲವು ಆಟಗಾರರು ತಿರುಮಲಕ್ಕೆ ಭೇಟಿ ನೀಡಿದ್ದರು. ಆ ಬಳಿಕ ತಂಡದ ಅದೃಷ್ಟ ಬದಲಾಗಿ ಪ್ರಶಸ್ತಿ ಗೆದ್ದಿತ್ತು ಎಂಬ ನಂಬಿಕೆ ಅಭಿಮಾನಿಗಳಲ್ಲಿ ಇದೆ. ಇದೀಗ ಸಿಎಸ್‌ಕೆ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಮತ್ತೆ ತಿಮ್ಮಪ್ಪನ ದರ್ಶನ ಪಡೆದಿರುವುದು ಗಮನ ಸೆಳೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !