ಮಂಜೇಶ್ವರ ವಿಧಾನಸಭಾ ಕ್ಷೇತ್ರ ಚುನಾವಣೆ ಲಂಚ ಪ್ರಕರಣ: ಬಿಜೆಪಿ ರಾಜ್ಯಾಧ್ಯಕ್ಷರಿಗೆ ಜಾಮೀನು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಲಂಚ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಿರುವ ಕೇಸಿನಲ್ಲಿ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಸಹಿತ ಪಕ್ಷದ ಇತರ ಎಲ್ಲಾ ಪದಾಕಾರಿಗಳಿಗೆ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯವು ಬುಧವಾರ ಜಾಮೀನು ನೀಡಿದೆ.

ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ನವೆಂಬರ್ ೧೫ಕ್ಕೆ ಮುಂದೂಡಿದೆ. ಕೆ.ಸುರೇಂದ್ರನ್ ಮತ್ತು ಪಕ್ಷದ ಇತರ ಪದಾಕಾರಿಗಳು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಿದ್ದರು.

ಈ ಪ್ರಕರಣವನ್ನು ಮೂರು ಬಾರಿ ಪರಿಗಣಿಸಿದ್ದರೂ ಆರೋಪ ಸ್ಥಾನದಲ್ಲಿರುವವರು ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ. ಅಲ್ಲದೆ ಈ ಕೇಸನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಆರೋಪ ಸ್ಥಾನದಲ್ಲಿರುವವರ ವಕೀಲರು ನ್ಯಾಯಾಲಯದಲ್ಲಿ ಹಾಜರಾಗಿ ಪ್ರಸ್ತುತ ಪ್ರಕರಣದಿಂದ ತನ್ನ ಕಕ್ಷಿದಾರರನ್ನು ಹೊರತುಪಡಿಸಬೇಕೆಂದು ಒತ್ತಾಯಿಸಿದ್ದರು. ಆದರೆ ಅವರೆಲ್ಲರೂ ನ್ಯಾಯಾಲಯದಲ್ಲಿ ಹಾಜರಾದ ಬಳಿಕವಷ್ಟೇ ಅವರನ್ನು ಪ್ರಕರಣದಿಂದ ಕೈಬಿಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತ್ತು. ಅದರಂತೆ ಕೆ.ಸುರೇಂದ್ರನ್ ಸಹಿತ ಇತರರು ಬುಧವಾರ ನ್ಯಾಯಾಲಯದಲ್ಲಿ ನೇರವಾಗಿ ಹಾಜರಾದರು. ಬಳಿಕ ವಿಚಾರಣೆ ನಡೆಸಿದ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿತು.

ಲಂಚ ಪ್ರಕರಣದಲ್ಲಿ ಯಾವುದೇ ಸತ್ಯಾಂಶವಿಲ್ಲ: ಕೆ.ಸುರೇಂದ್ರನ್
ನ್ಯಾಯಾಲಯದಲ್ಲಿ ಹಾಜರಾಗಿ ಹೊರ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಸುರೇಂದ್ರನ್ ಅವರು, ಈ ಪ್ರಕರಣದಲ್ಲಿ ಯಾವುದೇ ಸತ್ಯಾಂಶವಿಲ್ಲ. ಹೀಗಿದ್ದರೂ ಸಿಪಿಎಂನ ಕೆಲವು ಶಕ್ತಿಗಳು ವಿನಾಕಾರಣ ನ್ಯಾಯಾಲಯದಲ್ಲಿ ತಮ್ಮ ಮೇಲೆ ಮೊಕದ್ದಮೆ ದಾಖಲಿಸಿವೆ. ಪೊಲೀಸರು ಈ ಹಿಂದೆಯೇ ತನ್ನ ಹೇಳಿಕೆಯನ್ನು ವಿವರವಾಗಿ ಸಂಗ್ರಹಿಸಿದ್ದರು. ಈ ಪ್ರಕರಣದಲ್ಲಿ ತನಗೆ ಜಾಮೀನು ದೊರಕಲಿದೆಯೆಂದು ತನಗೆ ಈ ಹಿಂದೆಯೇ ನಿರೀಕ್ಷೆಯಿತ್ತು ಎಂದರು.

ಇದೊಂದು ಸುಳ್ಳು ಮತ್ತು ಕಟ್ಟುಕತೆಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಕಿರುಕುಳ ತಡೆ ಕಾಯ್ದೆಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಈಗ ಸಿಪಿಎಂ ಶಕ್ತಿಗಳ ಕೈವಾಡದಿಂದ ದಾಖಲಾಗಿರುವ ಕೇಸಿನ ಮೂಲಕ ಬಿಜೆಪಿಯನ್ನು ನಿರ್ಮೂಲಗೊಳಿಸಲು ಸಾಧ್ಯವಿಲ್ಲ. ಕೊಡಕ್ಕರ, ಬತ್ತೇರಿ ಕೇಸು ಕೂಡಾ ಈಗಾಗಲೇ ವಿಫಲಗೊಂಡಿದ್ದು, ಅದೇ ರೀತಿ ಮಂಜೇಶ್ವರ ಲಂಚ ಪ್ರಕರಣ ಕೂಡಾ ಸೋಲು ಅನುಭವಿಸಲಿದೆ. ಬಿಜೆಪಿಯನ್ನು ಮುಗಿಸಬಹುದೆಂದು ಯಾರೂ ಭಾವಿಸುವುದು ಬೇಡ. ಇಂತಹ ಕೇಸುಗಳ ಮೂಲಕ ಬಿಜೆಪಿ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಕೆ.ಸುರೇಂದ್ರನ್ ಇದೇ ಸಂದರ್ಭ ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!