ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ 123ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಲಬುರಗಿಯ ಖ್ಯಾತ ‘ಜೋಳದ ರೊಟ್ಟಿ’ ಮತ್ತು ಅದನ್ನು ತಯಾರಿಸುತ್ತಿರುವ ಮಹಿಳೆಯರ ಶ್ರಮವನ್ನು ಶ್ಲಾಘಿಸಿದರು. ಮಹಿಳಾ ಶಕ್ತಿಯೆ ಭಾರತ ಅಭಿವೃದ್ಧಿಯ ನವ ಮಂತ್ರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಕಲಬುರಗಿಯ ಮಹಿಳೆಯರು ಸ್ವಸಹಾಯ ಸಂಘದ ಮೂಲಕ ತಯಾರಿಸುತ್ತಿರುವ ಜೋಳದ ರೊಟ್ಟಿಗೆ ವಿಶೇಷವಾಗಿ ಪ್ರಶಂಸೆ ವ್ಯಕ್ತಪಡಿಸಿದರು. “ಕಲಬುರಗಿಯ ಮಹಿಳೆಯರು ಪ್ರತಿದಿನ 3 ಸಾವಿರ ರೊಟ್ಟಿಗಳನ್ನು ತಯಾರಿಸುತ್ತಿದ್ದಾರೆ. ಈ ರೊಟ್ಟಿಗಳು ಇಂದು ಗ್ರಾಮ ಮಟ್ಟಕ್ಕೆ ಮಾತ್ರ ಸೀಮಿತವಿಲ್ಲ. ಬೆಂಗಳೂರಿನಲ್ಲಿ ವಿಶೇಷ ಮಳಿಗೆ ಆರಂಭವಾಗಿದ್ದು, ಆನ್‌ಲೈನ್ ಆರ್ಡರ್‌ಗಳ ಮೂಲಕ ನಗರದಲ್ಲಿಯೂ ಹೆಚ್ಚಿನ ಬೇಡಿಕೆಯಲ್ಲಿವೆ,” ಎಂದು ಮೋದಿ ತಿಳಿಸಿದ್ದಾರೆ.
ಈ ಪ್ರಯತ್ನವನ್ನು ಆತ್ಮನಿರ್ಭರ ಭಾರತ ಅಭಿಯಾನದ ಪ್ರತೀಕವೆಂದು ವಿವರಿಸಿದ ಮೋದಿ, “ಮಹಿಳೆಯರ ಪರಿಶ್ರಮ, ಸಮರ್ಪಣೆ, ಮತ್ತು ಉತ್ಸಾಹ ಇಡೀ ಸಮಾಜಕ್ಕೆ ಪ್ರೇರಣೆಯಾಗುತ್ತಿದೆ. ತಾಯಿ, ಸಹೋದರಿ, ಮಗಳು ಎಲ್ಲರೂ ಭಾರತೀಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡುತ್ತಿದ್ದಾರೆ,” ಎಂದು ಅವರು ಅಭಿಮಾನದೊಂದಿಗೆ ಹೇಳಿದರು.
ಕಲಬುರಗಿಯ ಬಿಸಿಲು ನಾಡಿನಲ್ಲಿ ಹುಟ್ಟಿದ ಈ ರುಚಿಕರ ಜೋಳದ ರೊಟ್ಟಿಗೆ ಈಗ ಜಾಗತಿಕ ಮಟ್ಟದಲ್ಲಿ ಮಾನ್ಯತೆ ದೊರೆಯುತ್ತಿದೆ ಎಂಬುದು ಸ್ಥಳೀಯರಿಗೂ ಹೆಮ್ಮೆಯ ಸಂಗತಿಯಾಗಿದ್ದು, ಪ್ರಧಾನಿ ಅವರ ಬಾಯಿಂದ ಈ ಮೆಚ್ಚುಗೆ ಕೇಳಿದ ಮಹಿಳಾ ಸಂಘದ ಸದಸ್ಯರು ಖುಷಿಪಟ್ಟಿದ್ದಾರೆ.