ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಹಬ್ಬದ ಸಾಲು ಸಾಲು ರಜೆ ಮುಗಿಸಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದ ಜನ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ನಿನ್ನೆ ಸಂಜೆಯಿಂದಲೇ ನಗರಕ್ಕೆ ಸಂಪರ್ಕ ಕಲ್ಪಸುವ ಹೆದ್ದಾರಿಗಳು ವಾಹನ ಸವಾರರಿಂದ ಗಿಜಿಗುಡುತ್ತಿದ್ದು, ಇಂದು ಮುಂಜಾನೆಯೂ ಸಂಚಾರ ದಟ್ಟಣೆ ಮುಂದುವರಿದಿದೆ.
ಹಾಸನ-ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಕಂಡುಬಂತು. ಇತ್ತ ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು ಭಾಗದಿಂದ ಬರುವವರ ಸಂಖ್ಯೆ ಹೆಚ್ಚಾಗಿದ್ದು, ನೆಲಮಂಗಲ ಟೋಲ್ ಬಳಿ ಎರಡು ಕಿಮೀವರೆಗೆ ವಾಹನಗಳು ಕ್ಯೂ ನಿಂತಿವೆ.
ಬೆಂಗಳೂರು-ಕನಕಪುರ ರಸ್ತೆ, ಯಲಹಂಕ-ಹೆಬ್ಬಾಳ ಫ್ಲೈ ಓವರ್, ತುಮಕೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಮಾನ್ಯತಾ ಟೆಕ್ ಪಾರ್ಕ್ ರಸ್ತೆಗಳೂ ಸಂಪೂರ್ಣ ಜಾಮ್‌ನಿಂದ ಕೂಡಿದ್ದು, ಬೆಳ್ಳಂಬೆಳಗ್ಗೆ ಕೆಲಸಕ್ಕೆ ಹೋಗುವ ಉದ್ಯೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಮೆಟ್ರೋ ಮೊರೆ ಹೋದ ಐಟಿ ಉದ್ಯೋಗಿಗಳು
ಬೆಂಗಳೂರು ಸಂಚಾರ ದಟ್ಟಣೆಗೆ ಬೇಸತ್ತ ಐಟಿ-ಬಿಟಿ ಉದ್ಯೋಗಿಗಳು ಮೆಟ್ರೋ ಮೊರೆ ಹೋಗುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್ ಕಡೆಗೆ ಹೋಗುವವರು ಮೆಟ್ರೋ ಅವಲಂಬಿಸಿದ್ದು, ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.