ಹೊಸದಿಗಂತ ಡಿಜಿಟಲ್ ಡೆಸ್ಕ್:
20ಕ್ಕೂ ಹೆಚ್ಚು ಪ್ರಕರಣಗಳಲ್ಲಿ 27ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಮಾವೋವಾದಿಗಳ ಉನ್ನತ ನಾಯಕ ಮತ್ತು ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿಯ ಸದಸ್ಯ ಸಂದೀಪ್ ಅಥವಾ ವಿಜಯ್ ಯಾದವ್ ಅವರು ಶವವಾಗಿ ಪತ್ತೆಯಾಗಿದ್ದಾರೆ.
ಗಯಾದ ಲುಟುವಾ ಅರಣ್ಯದಲ್ಲಿ ಬುಧವಾರ ಸಂಜೆ ಅವರ ಶವ ಪತ್ತೆಯಾಗಿರುವುದನ್ನು ಗಯಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹರ್ಪೀತ್ ಕೌರ್ ಖಚಿತಪಡಿಸಿದ್ದಾರೆ . ಬಿಹಾರ, ಜಾರ್ಖಂಡ್ ಮತ್ತು ಛತ್ತೀಸ್ಗಢ ಸೇರಿದಂತೆ ಐದು ರಾಜ್ಯಗಳ ಪೊಲೀಸರಿಗೆ ಬೇಕಾಗಿರುವ ಯಾದವ್ ಅವರು ಸಿಪಿಐ (ಮಾವೋವಾದಿ) ಕೇಂದ್ರ ವಲಯದ ಉಸ್ತುವಾರಿ ವಹಿಸಿದ್ದರು ಮತ್ತು 1990ರಿಂದಲೂ ಮಾವೋವಾದಿಗಳ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಯಾದವ್ 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಅವರ ತಲೆಗೆ ಬಿಹಾರ ಸರ್ಕಾರ 5 ಲಕ್ಷ ರೂಪಾಯಿ ಹಾಗೂ ಜಾರ್ಖಂಡ್ ಸರ್ಕಾರ 25 ಲಕ್ಷ ಬಹುಮಾನ ಘೋಷಿಸಿತ್ತು. 56 ವರ್ಷದ ಯಾದವ್ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು ಔಷಧಿ ಸೇವಿಸಿದ ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ಬಿಹಾರ ಪೊಲೀಸ್ ಮೂಲಗಳು ತಿಳಿಸಿವೆ.