ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿಗೆ ಸಂಬಂಧಿಸಿದಂತೆ ಹಿಂಸಾತ್ಮಕ ಘಟನೆಗಳು ಭುಗಿಲೆದ್ದಿದ್ದು, ಸೋಮವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಿಎಂ ನಿವಾಸದಲ್ಲಿ ಅಧಿಕೃತ ಸಭೆ ನಡೆಸಿದರು.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ, “ಈ ಪ್ರತಿಭಟನೆಯು ಯಾವ ತಿರುವು ಪಡೆದುಕೊಳ್ಳುತ್ತಿದೆ ಎಂಬುದನ್ನು ಮನೋಜ್ ಜಾರಂಗೆ ಪಾಟೀಲ್ (ಮರಾಠ ಮೀಸಲಾತಿ ಹೋರಾಟಗಾರ) ಗಮನಿಸಬೇಕು. ಇದು ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ. ಮರಾಠಾ ಮೀಸಲಾತಿ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡದಂತೆ ಎಚ್ಚರಿಕೆ ನೀಡಿದ ಅವರು, ಕೆಲವು ವ್ಯಕ್ತಿಗಳಿಂದಾಗಿ ಇಡೀ ಪ್ರತಿಭಟನೆಯ ಮೇಲೆ ಅನುಮಾನ ಮೂಡುತ್ತಿದೆ” ಎಂದರು.
ಮರಾಠಾ ಮೀಸಲಾತಿ ವಿಚಾರವಾಗಿ ಉಪ ಸಮಿತಿಯ ಮಹತ್ವದ ಸಭೆ ನಡೆಸಿದ್ದು, ಈ ಬಗ್ಗೆ ಪರಿಶೀಲಿಸಲು ಸರ್ಕಾರ ವಿವಿಧ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಲಹಾ ಮಂಡಳಿಯನ್ನು ರಚಿಸಿರುವುದಾಗಿ ಶಿಂಧೆ ತಿಳಿಸಿದರು.
ಇನ್ನೂ ಬೀಡ್ ಜಿಲ್ಲೆಯಲ್ಲಿ ಹಿಂಸಾಚಾರ ಮುಂದುವರಿದಿದ್ದು, ಕಾನೂನು ಸುವ್ಯವಸ್ಥೆ ಸ್ಥಾಪಿಸುವ ಸಲುವಾಗಿ ಜಿಲ್ಲಾಧಿಕಾರಿ ದೀಪಾ ಮುಧೋಳ ಮುಂಡೆ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದರು. ಜಿಲ್ಲಾ ಕೇಂದ್ರ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮರಾಠಾ ಮೀಸಲಾತಿ ಪರ ಪ್ರತಿಭಟನಾಕಾರರ ಗುಂಪೊಂದು ಬೀಡ್ ನಗರದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಕಚೇರಿಗೆ ಬೆಂಕಿ ಹಚ್ಚಿದೆ. ಅಲ್ಲದೆ, ಎನ್‌ಸಿಪಿ ಶಾಸಕ ಸಂದೀಪ್ ಕ್ಷೀರಸಾಗರ್ ಮತ್ತು ರಾಜ್ಯದ ಮಾಜಿ ಸಚಿವ ಜಯ್ ಕ್ಷೀರಸಾಗರ್ ಅವರ ನಿವಾಸಗಳಿಗೂ ಬೆಂಕಿ ಹಚ್ಚಿದ್ದಾರೆ.