ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹಾಗೂ ವಿಕೆಟ್‌ಕೀಪರ್-ಬ್ಯಾಟರ್ ಅಲಿಸಾ ಹೀಲಿ, ಮಾರ್ಚ್‌ನಲ್ಲಿ ಭಾರತ ವಿರುದ್ಧದ ತವರಿನಲ್ಲಿ ನಡೆಯಲಿರುವ ಸರಣಿಯ ನಂತರ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ಘೋಷಿಸಿದ್ದಾರೆ. ಭಾರತ ವಿರುದ್ಧ ನಡೆಯಲಿರುವ ಸ್ವದೇಶಿ ಸರಣಿಯು ಆಸ್ಟ್ರೇಲಿಯಾ ಪರ ಅವರ ಕೊನೆಯ ಸರಣಿಯಾಗಲಿದೆ. ಇದರೊಂದಿಗೆ 15 ವರ್ಷಗಳ ಅದ್ಭುತ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಬೀಳಲಿದೆ.
35 ವರ್ಷದ ಹೀಲಿ ಹದಿಹರೆಯದಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದು, ಮೂರು ಸ್ವರೂಪಗಳಲ್ಲಿ ಸುಮಾರು 300 ಪಂದ್ಯಗಳಲ್ಲಿ ಆಡಿದ್ದಾರೆ. 7,000ಕ್ಕೂ ಹೆಚ್ಚು ರನ್‌ಗಳು, ವಿಕೆಟ್ ಹಿಂದೆ 275 ಔಟ್‌ಗಳು ಅವರ ಸಾಧನೆಯ ಪುಸ್ತಕದಲ್ಲಿದೆ. ಅವರ ಸಾಧನೆಗಳು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿವೆ.
ನಿವೃತ್ತಿ ಘೋಷಣೆಯ ಕುರಿತು ಮಾತನಾಡಿದ ಹೀಲಿ, “ದೇಶವನ್ನು ಪ್ರತಿನಿಧಿಸುವುದು ನನ್ನ ಜೀವನದ ಅತಿದೊಡ್ಡ ಗೌರವ. ಆದರೆ ಈಗ ಸ್ಪರ್ಧಾತ್ಮಕ ತೀವ್ರತೆ ಸ್ವಲ್ಪ ಕಡಿಮೆಯಾಗುತ್ತಿದೆ ಎಂದು ಅನಿಸುತ್ತದೆ. ಆದ್ದರಿಂದ ನಿವೃತ್ತಿಗೆ ಇದು ಸರಿಯಾದ ಸಮಯ” ಎಂದು ಹೇಳಿದರು.
2023ರಲ್ಲಿ ಮೆಗ್ ಲ್ಯಾನಿಂಗ್ ಬಳಿಕ ತಂಡದ ಪೂರ್ಣಾವಧಿ ನಾಯಕತ್ವ ವಹಿಸಿಕೊಂಡ ಹೀಲಿ, ಇಂಗ್ಲೆಂಡ್ ವಿರುದ್ಧ ಐತಿಹಾಸಿಕ 16-0 ವೈಟ್‌ವಾಶ್ ಗೆಲುವಿಗೆ ತಂಡವನ್ನು ಮುನ್ನಡೆಸಿದ್ದರು. ಎಂಟು ವಿಶ್ವಕಪ್‌ಗಳಲ್ಲಿ ಭಾಗವಹಿಸಿರುವ ಅವರು, ಮಹಿಳಾ ಕ್ರಿಕೆಟ್‌ನ ಅತ್ಯಂತ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರೆಂದು ಗುರುತಿಸಿಕೊಂಡಿದ್ದಾರೆ.
ಭಾರತ ವಿರುದ್ಧದ ಫೆಬ್ರವರಿ–ಮಾರ್ಚ್ ಸರಣಿಯಲ್ಲಿ ಮೂರು ಟಿ20, ಎರಡು ಏಕದಿನ ಮತ್ತು ಒಂದು ಟೆಸ್ಟ್ ಪಂದ್ಯಗಳಿದ್ದು, ಹೀಲಿ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ.


