ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ತಿಂಗಳಲ್ಲಿ ಸಾಲು-ಸಾಲಾಗಿ ಮೂರು ದೊಡ್ಡ ಸಿನಿಮಾಗಳು ತೆರೆಗೆ ಬರಲಿದ್ದು, ಭರ್ಜರಿ ಪೈಪೋಟಿ ಶುರುವಾಗಿದೆ. ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆ ಆಗಲಿದೆ. ಅದಾದ ಬಳಿಕ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟಿಸಿರುವ ‘45’ ಬಿಡುಗಡೆ ಆಗಲಿದೆ. ಅದೇ ದಿನ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಸಹ ತೆರೆಗೆ ಬರಲಿದೆ.
‘ಮಾರ್ಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸಿನಿಮಾ ರಿಚ್ ಆಗಿ ಕಾಣುತ್ತಿದೆ. ಸಿನಿಮಾದ ಚಿತ್ರೀಕರಣದ ಬಗ್ಗೆ ಸುದೀಪ್ ವಿವರಿಸಿದ್ದಾರೆ.
‘ಮಾರ್ಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರಣಕ್ಕೆ ಇಂದು (ಡಿಸೆಂಬರ್ 07) ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಸುದೀಪ್, ರಾಕ್ಲೈನ್ ವೆಂಕಟೇಶ್, ಪ್ರೇಮ್, ಸುದೀಪ್ ಪತ್ನಿ ಪ್ರಿಯಾ ಇನ್ನೂ ಹಲವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
‘ಮಾರ್ಕ್’ ಸಿನಿಮಾದ ಚಿತ್ರೀಕರಣದ ಬಗ್ಗೆ ಮಾತನಾಡಿದ ಸುದೀಪ್, ‘ಈ ಸಿನಿಮಾಕ್ಕೆ ಒಟ್ಟು 107 ದಿನಗಳ ಚಿತ್ರೀಕರಣವನ್ನು ನಾವು ಮಾಡಿದ್ದೀವಿ, 166 ಕಾಲ್ಶೀಟ್ಗಳನ್ನು ನಾವು ಮಾಡಿದ್ದೀವಿ. ಸುಮಾರು 80-90 ಲೊಕೇಶನ್ಗಳಲ್ಲಿ ಚಿತ್ರೀಕರಣ ಮಾಡಿದ್ದೀವಿ, ಸುಮಾರು 18 ರಿಂದ 20 ಸೆಟ್ಗಳನ್ನು ನಾವು ನಿರ್ಮಿಸಿದ್ದೀವಿ. ಈ ಸಿನಿಮಾ ಪ್ರಾರಂಭ ಆದಾಗಿನಿಂದ ಅಂತ್ಯ ಆಗುವವರೆಗೆ ಸುಮಾರು ಒಂದು ಲಕ್ಷ ಜನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.
ಸಿನಿಮಾದ ಸಂಖ್ಯೆಗಳು ಎಲ್ಲವೂ ದೊಡ್ಡದಾಗಿಯೇ ಆದರೆ ಚಿಕ್ಕದಾಗಿರುವುದು ನಿದ್ದೆ ಮಾಡಿದ ಸಮಯ, ವಿಶ್ರಾಂತಿ ಪಡೆದ ಸಮಯ. ಇದೇ ಸಿನಿಮಾದ ಚಿತ್ರೀಕರಣಕ್ಕೆ ನಾನು ಶಾಲೆಯೊಂದಕ್ಕೆ ಹೋಗಿದ್ದೆ. ಅಲ್ಲಿ ರಾತ್ರಿ ಮೂರು ಗಂಟೆ ವರೆಗೂ ಚಿತ್ರೀಕರಣ ಮಾಡಿದೆವು. ನಾನು ಮೂರು ಗಂಟೆಗೆ ಚಿತ್ರೀಕರಣ ಮುಗಿಸಿಕೊಂಡು ಹೊರಗೆ ಬರುತ್ತಿದ್ದೆ ಆಗ ಇನ್ನೊಂದು ಬ್ಯಾಚ್ ಒಳಗೆ ಹೋಗುತ್ತಿತ್ತು. ಹೀಗೆ ಬಿಡುವಿಲ್ಲದೆ ಚಿತ್ರೀಕರಣವನ್ನು ನಾವು ಮಾಡಿದ್ದೇವೆ ಎಂದಿದ್ದಾರೆ ಸುದೀಪ್.
ಈ ಸಿನಿಮಾಕ್ಕೆ ನಿಜವಾದ ಇಬ್ಬರು ನಾಯಕರೆಂದರೆ ನಿರ್ದೇಶಕ ಮತ್ತು ಕ್ಯಾಮೆರಾಮ್ಯಾನ್. ಇಬ್ಬರೂ ಸಹ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಹಗಲು ರಾತ್ರಿಗಳನ್ನು ಒಂದು ಮಾಡಿ ಕೆಲಸ ಮಾಡಿದ್ದಾರೆ’ ಎಂದು ಕೊಂಡಾಡಿದರು.
ನನಗೆ ಕೆಲಸ ಮಾಡುವುದು ಇಷ್ಟ, ಕೆಲಸ ಮಾಡಿ ದಣಿಯುವುದು ಇಷ್ಟ. ನನಗೆ ಅಂತಿಮವಾಗಿ ಖುಷಿ ಸಿಗುವುದು ಕೆಲಸದಲ್ಲಿ, ನನ್ನ ನಿರ್ಮಾಪಕರ ಖುಷಿಯಲ್ಲಿ. ನನ್ನ ನಿರ್ಮಾಪಕರ ಜೇಬು ತುಂಬಿದರೆ ನನಗೆ ಖುಷಿ’ ಎಂದಿದ್ದಾರೆ. ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ತೆರೆಗೆ ಬರಲಿದೆ.

