ಮೀನಿನ ಖಾದ್ಯ ಬಹುಮಟ್ಟಿಗೆ ಜನಪ್ರಿಯವಾಗಿದೆ. ಮಳೆಗಾಲದಲ್ಲಿ ಮೀನಿಗೆ ಬೇಡಿಕೆಯೂ ಹೆಚ್ಚಾಗುತ್ತದೆ. ಮಾರುಕಟ್ಟೆ ಅಥವಾ ಮನೆಮುಂದಿನ ಮಾರಾಟಗಾರರಿಂದ ಮೀನು ಖರೀದಿಸುವಾಗ, ಅದು ತಾಜಾ ಮೀನು ಆಗಿರಬೇಕೆಂಬುದು ಆರೋಗ್ಯದ ದೃಷ್ಟಿಯಿಂದ ಬಹುಮುಖ್ಯ. ಸಂಗ್ರಹಿಸಿದ ಅಥವಾ ಹಾಳಾದ ಮೀನು ತಿನ್ನುವುದು ಆರೋಗ್ಯಕ್ಕೆ ತೀವ್ರ ಹಾನಿಯುಂಟುಮಾಡಬಹುದು.
ತಾಜಾ ಮೀನು ಎಂದರೆ ಕೇವಲ ರುಚಿಯ ವಿಚಾರವಲ್ಲ. ಅದು ಪೋಷಕಾಂಶಗಳ ಸಮೃದ್ಧ ತಿನಿಸು. ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಡಿ, ವಿಟಮಿನ್ ಬಿ2, ಕ್ಯಾಲ್ಸಿಯಂ, ಪ್ರೋಟೀನ್, ಅಯೋಡಿನ್ ಮುಂತಾದವುಗಳು ಸಮೃದ್ಧವಾಗಿ ಅಡಕವಾಗಿವೆ. ಆದರೆ, ಹಳೆಯ ಅಥವಾ ಸೂಕ್ತವಾಗಿ ಸಂಗ್ರಹಿಸದ ಮೀನಿನಲ್ಲಿ ಈ ಪೋಷಕಾಂಶಗಳು ನಾಶವಾಗಬಹುದು. ಆದ್ದರಿಂದ, ತಾಜಾ ಮೀನು ಗುರುತಿಸಲು ಕೆಲವು ಪ್ರಮುಖ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ.
ತಾಜಾ ಮೀನು ಖರೀದಿಸಲು, ಮೊದಲು ಕಣ್ಣುಗಳನ್ನು ಪರಿಶೀಲಿಸಬೇಕು. ಹೈಡ್ರೇಟೆಡ್, ಸ್ಪಷ್ಟ ಹಾಗೂ ಹೊಳೆಯುವ ಕಣ್ಣುಗಳು ಮೀನಿನ ತಾಜಾ ಸ್ವಭಾವದ ಸೂಚಕ. ಹಾಗೆಯೇ, ತಾಜಾ ಮೀನಿಗೆ ಕಡಿಮೆ ವಾಸನೆ ಇರುತ್ತದೆ. ದುರ್ವಾಸನೆ, ಮಸಿ ಅಥವಾ ಅಮೋನಿಯಾದ ವಾಸನೆ ಬರುತ್ತಿದ್ದರೆ ಅದು ಹಳೆಯ ಮೀನು ಎಂಬ ಸೂಚನೆ. ಮೀನಿನ ಕಿವಿರುಗಳು ಪ್ರಕಾಶಮಾನವಾದ ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿರಬೇಕು. ಬೂದು ಬಣ್ಣದ ಅಥವಾ ಒಣಗಿದ ಕಿವಿರುಗಳು ಹಳೆಯ ಮೀನಿಗೆ ಗುರುತು.
ಅಲ್ಲದೆ, ಚರ್ಮ ಮತ್ತು ಮಾಂಸವನ್ನು ಸ್ಪರ್ಶಿಸಿ ಪರೀಕ್ಷಿಸಬಹುದು. ತಾಜಾ ಮೀನು ಚರ್ಮ ತೇವಾಂಶವುಳ್ಳದ್ದು, ಮಾಂಸವು ಬಿಗಿಯಾದದ್ದಾಗಿರುತ್ತದೆ. ಬೆರಳಿನಿಂದ ಒತ್ತಿದರೆ ತಕ್ಷಣ ಚಿಮ್ಮುತ್ತದೆ. ಹಳೆಯ ಮೀನಿನಲ್ಲಿ ಚರ್ಮ ಜಿಗುಟಾಗಿರುತ್ತದೆ ಮತ್ತು ಮಾಂಸ ಮೃದುವಾಗಿರುತ್ತದೆ. ಮೀನಿನ ಬಾಲ ಕೂಡ ನೇರವಾಗಿ ಹೊಳೆಯುವ ರೀತಿಯಲ್ಲಿ ಕಾಣಿಸಬೇಕು. ಬಣ್ಣ ಕಳೆದುಕೊಂಡಿರೋ ಅಥವಾ ಒಣಗಿದ ಬಾಲವಿದ್ದರೆ ಅದು ತಾಜಾ ಮೀನು ಅಲ್ಲ.
ಖರೀದಿಸಿದ ನಂತರ, ಮೀನುಗಳನ್ನು ನೀರಿನಲ್ಲಿ ಇಡುವುದನ್ನು ತಪ್ಪಿಸಿ, ಐಸ್‌ನಲ್ಲಿ ಸಂಗ್ರಹಿಸುವುದು ಉತ್ತಮ. ನೀರಿನಲ್ಲಿ ಇಡುವುದರಿಂದ ದುರ್ವಾಸನೆ ಹೆಚ್ಚಾಗಿ, ಬ್ಯಾಕ್ಟೀರಿಯಾ ಉತ್ಪತ್ತಿಯಾಗುವ ಸಾಧ್ಯತೆ ಇದೆ.
ಹೀಗಾಗಿ ಮಾರುಕಟ್ಟೆಯಲ್ಲಿ ಮೀನು ಖರೀದಿಸುವಾಗ, ಇಲ್ಲಿ ಉಲ್ಲೇಖಿಸಿರುವ ಎಲ್ಲಾ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು, ಆರೋಗ್ಯಕರ ಮತ್ತು ಪೋಷಕಾಂಶಗಳ ಸಮೃದ್ಧತೆಯಿಂದ ಕೂಡಿದ ತಾಜಾ ಮೀನನ್ನು ಆಯ್ಕೆಮಾಡುವುದು ಅತ್ಯವಶ್ಯಕ.