Thursday, December 4, 2025

53 ರನ್‌ಗಳಿಗೆ ಸಿಕ್ಕ ಜೀವದಾನ ಬಳಸಿಕೊಂಡು ಭಾರತಕ್ಕೆ ಕಂಟಕವಾದ ಮಾರ್ಕ್ರಾಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್‌ಮನ್ ಐಡೆನ್ ಮಾರ್ಕ್ರಾಮ್ ಅಮೋಘ ಪ್ರದರ್ಶನ ನೀಡಿ ಆಕರ್ಷಕ ಶತಕ ದಾಖಲಿಸಿದರು. ಇದು ಅವರ ನಾಲ್ಕನೇ ಏಕದಿನ ಶತಕವಾಗಿದೆ. ಆದರೆ, ಈ ಶತಕದ ನಿರ್ಮಾಣದಲ್ಲಿ ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಪಾತ್ರವೂ ಪ್ರಮುಖವಾಗಿದೆ!

ಪಂದ್ಯದಲ್ಲಿ ಕಳಪೆ ಆರಂಭ ಪಡೆದ ಮಾರ್ಕ್ರಾಮ್, ಕೆಲವು ಬಾರಿ ಔಟಾಗುವ ಅಪಾಯದಿಂದ ಪಾರಾಗಿದ್ದರು. ಅವರು ಕೇವಲ 53 ರನ್ ಗಳಿಸಿದ್ದಾಗ, ಲಾಂಗ್-ಆನ್ ಬೌಂಡರಿಯಲ್ಲಿ ಜೈಸ್ವಾಲ್​ಗೆ ಸರಳವಾದ ಕ್ಯಾಚ್ ಅನ್ನು ನೀಡಿದ್ದರು. ಆದರೆ ಜೈಸ್ವಾಲ್ ಅದನ್ನು ಕೈಬಿಡುವ ಮೂಲಕ ಅವರಿಗೆ ಜೀವದಾನ ನೀಡಿದರು. ಈ ಒಂದು ಎಡವಟ್ಟು ಭಾರತೀಯ ತಂಡಕ್ಕೆ ಭಾರಿ ದುಬಾರಿಯಾಯಿತು. ಈ ಲೈಫ್‌ಲೈನ್ ಅನ್ನು ಸದುಪಯೋಗಪಡಿಸಿಕೊಂಡ ಮಾರ್ಕ್ರಾಮ್, ನಂತರ ಲಯ ಕಂಡುಕೊಂಡು ತಮ್ಮ ಆಟದ ಗತಿಯನ್ನೇ ಬದಲಾಯಿಸಿದರು.

52 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದ ಮಾರ್ಕ್ರಾಮ್, 88 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಇದು ಅವರಿಗೆ ಆರಂಭಿಕ ಆಟಗಾರನಾಗಿ ಮೊದಲ ಶತಕ ಹಾಗೂ ಭಾರತದ ವಿರುದ್ಧ ಚೊಚ್ಚಲ ಶತಕವಾಗಿದೆ. ಶತಕದ ನಂತರ ಮಾರ್ಕ್ರಾಮ್ ತಮ್ಮ ಹೊಡಿಬಡಿ ಆಟವನ್ನು ಮುಂದುವರೆಸಿದರು. ಅಂತಿಮವಾಗಿ, ಕೇವಲ 98 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಅಬ್ಬರದೊಂದಿಗೆ 110 ರನ್ ಬಾರಿಸಿ ಹರ್ಷಿತ್ ರಾಣಾಗೆ ಬಲಿಯಾದರು. ಮಾರ್ಕ್ರಾಮ್ ಅವರ ಈ ಭರ್ಜರಿ ಇನ್ನಿಂಗ್ಸ್ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಮೊತ್ತವನ್ನು ತಲುಪಲು ನೆರವಾಯಿತು.

error: Content is protected !!