Tuesday, December 2, 2025

ಜಸ್ಟ್ 20 ನಿಮಿಷಕ್ಕೆ ದಾಂಪತ್ಯ ಜೀವನ ಅಂತ್ಯ: ಗಂಡನ ಮನೆ ಸೇರುತ್ತಿದ್ದಂತೆ ಮುರಿದು ಬಿತ್ತು ಮದುವೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನದಲ್ಲಿ ಸಣ್ಣ-ಪುಟ್ಟ ವಿಚಾರಕ್ಕೆಲ್ಲ ದಂಪತಿ ದೂರಾಗುವ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ಇಲ್ಲೊಬ್ಬಳು ನವವಿವಾಹಿತೆ ಮದುವೆಯಾದ ದಿನವೇ ಪತಿಯೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ತನ್ನ ತವರು ಮನೆಗೆ ವಾಪಾಸಾದ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ.

ವಧುವಿನ ಒಪ್ಪಿಗೆಯಿಂದಲೇ ಮದುವೆ ಮಾಡಿಸಲಾಗಿದ್ದರೂ ಆಕೆ ಮಾತ್ರ ಗಂಡನ ಮನೆಗೆ ತಲುಪುತ್ತಿದ್ದಂತೆ ಉಲ್ಟಾ ಹೊಡೆದಿದ್ದಾಳೆ. ಮದುವೆಯಾಗಿ ಗಂಡನ ಮನೆ ತಲುಪಿ ಕೇವಲ 20ನಿಮಿಷಕ್ಕೆ ಮದುವೆ ಸಂಬಂಧ ಮುರಿದು ಬಿದ್ದಿದೆ .

ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಭಾಲುವಾನಿ ಮೂಲದ ವಿಶಾಲ್ ಮಧೇಸಿಯಾ ಅವರಿಗೆ ಸಲೆಂಪುರದ ಪೂಜಾ ಜತೆ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ವಿವಾಹ ನಿಶ್ಚಯವಾಗಿತ್ತು. ವರ ವಿಶಾಲ್ ತನ್ನ ತಂದೆಯ ಜನರಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ತಿಳಿದೇ ಪೂಜೆ ಮದುವೆ ಒಪ್ಪಿಕೊಂಡಿದ್ದಾಳೆ. ಹೀಗೆ ಆಕೆಯ ಸಮ್ಮತಿ ಮೇರೆಗೆ ಮದುವೆ ನೆರವೇರಿದೆ. ನವೆಂಬರ್ 25 ವಿವಾಹವಾಗಿದ್ದು, ವಧು ವರನ ಮನೆಗೆ ತಲುಪುತ್ತಿದ್ದಂತೆ ಕೆಲವು ಶಾಸ್ತ್ರ ಕೂಡ ಮಾಡಲಾಗಿದೆ. ಬಳಿಕ ಅವಳನ್ನು ವರನ ರೂಮ್‌ಗೆ ಕಳುಹಿಸಲಾಗಿದ್ದು ಬರೀ 20ನಿಮಿಷಕ್ಕೆ ಅವಳು ಕೋಣೆಯಿಂದ ಹೊರಬಂದು ತನ್ನ ಪತಿಯೊಂದಿಗೆ ವಾಸಿಸುವುದಿಲ್ಲ ಎಂದು ಹೇಳಿದ್ದಾಳೆ. ಇದನ್ನು ಕೇಳಿ ಅಲ್ಲಿದ್ದವರು ಶಾಕ್‌ ಆಗಿದ್ದಾರೆ.

ಮೊದಲಿಗೆ ಅಲ್ಲಿದ್ದವರು ತಮಾಷೆ ಮಾಡುತ್ತಿದ್ದಾಳೆಂದು ಭಾವಿಸಿದ್ದರು. ಆದರೆ ಆಕೆ ಈ ಬಗ್ಗೆ ತನ್ನ ಸ್ಪಷ್ಟ ನಿರಾಕರಣೆ ವ್ಯಕ್ತ ಪಡಿಸಿದಂತೆ ವರನ ಕಡೆಯವರು ಏನಾಯಿತು? ಅವಳು ಇದ್ದಕ್ಕಿದ್ದಂತೆ ತನ್ನ ಮನಸ್ಸನ್ನು ಬದಲಾಯಿಸಿಕೊಂಡಿದ್ಯಾಕೆ? ಎಂದು ಪ್ರಶ್ನಿಸಿದ್ದಾರೆ. ಆದರೆ ವಧು ಪೂಜಾ ಈ ಬಗ್ಗೆ ಯಾವುದೇ ಕಾರಣ ನೀಡಿಲ್ಲ. ವರನ ಕುಟುಂಬವು ಮನವೊಲಿಸಲು ಪ್ರಯತ್ನಿಸಿದ್ದರು ಪೂಜಾ ಮಾತ್ರ ಇಲ್ಲಿ ವಾಸಿಸುವುದಿಲ್ಲ, ತವರು ಮನೆಗೆ ಹೋಗುವುದಾಗಿ ಪಟ್ಟು ಹಿಡಿದಳು.

ನಂತರ ವಿಶಾಲ್ ಅವರ ಕುಟುಂಬವು ಪೂಜಾ ಮನೆಯವರಿಗೆ ಈ ವಿಚಾರ ತಿಳಿಸಿದ್ದಾರೆ. ಅವರು ಫೋನ್‌ನಲ್ಲೇ ಆಕೆಗೆ ಬುದ್ಧಿ ಹೇಳಿ ಎಲ್ಲ ವಿಚಾರ ಸರಿಪಡಿಸಲು ನಿರ್ಧರಿಸಿದ್ದಾರೆ. ಆದರೆ ಆಕೆ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದಕ್ಕಾಗಿ ಎರಡು ಕುಟುಂಬದವರು ಜತೆ ಸೇರಿಕೊಂಡು ಪಂಚಾಯ್ತಿ ನಡೆಸಿದ್ದಾರೆ. ಆಗಲೂ ಆಕೆ ಪತಿಯೊಂದಿಗೆ ಜೀವನ ಸಾಗಿಸಲು ನಿರಾಕರಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ಈ ಮದುವೆಯನ್ನು ಎರಡು ಕುಟುಂಬದವರು ಮುರಿದುಕೊಂಡು ಲಿಖಿತ ಒಪ್ಪಂದವನ್ನು ಸಿದ್ಧಪಡಿಸಿ ವಧುವನ್ನು ತವರು ಮನೆಗೆ ವಾಪಾಸು ಕಳುಹಿಸಲಾಗಿದೆ.

ಮದುವೆಯ ಸಮಯದಲ್ಲಿ ವಿನಿಮಯ ಮಾಡಿಕೊಂಡ ಎಲ್ಲ ಉಡುಗೊರೆಗಳು ಮತ್ತು ಹಣವನ್ನು ಎರಡೂ ಕಡೆಯವರು ಹಿಂದಿರುಗಿಸುವಂತೆ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಲಿಲ್ಲ ಎಂದು ತಿಳಿದು ಬಂದಿದೆ.

error: Content is protected !!