ಹೊಸದಿಗಂತ ದಾವಣಗೆರೆ:
ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಒಬ್ಬಂಟಿ ಮಹಿಳೆಯ ಕೊರಳಿನಿಂದ ಬಂಗಾರದ ಸರ ಕಿತ್ತುಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು ₹3 ಲಕ್ಷ ರೂ. ಮೌಲ್ಯದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಮಹಿಳೆಯ ಸಂಬಂಧಿಕರೇ ಆಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳನ್ನು ಹೆಚ್.ಬಿ.ದರ್ಶನ್ (22 ವರ್ಷ) ಮತ್ತು ಎ.ಆರ್.ವಿನಯ್ (20 ವರ್ಷ) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕದ್ದಿದ್ದ 30 ಗ್ರಾಂ ತೂಕದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಏನಿದು ಘಟನೆ?
ಕಳೆದ ಅಕ್ಟೋಬರ್ 14 ರಂದು ಸಂಜೆ, ಹುಣಸಘಟ್ಟ ಗ್ರಾಮದ ಅಡಿಕೆ ತೋಟದಲ್ಲಿ ಪಾರ್ವತಮ್ಮ ಎಂಬ ಮಹಿಳೆಯು ಒಬ್ಬರೇ ಹುಲ್ಲು ಕೀಳುತ್ತಿದ್ದರು. ಈ ವೇಳೆ, ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಬಂದಿದ್ದ ದುಷ್ಕರ್ಮಿಗಳಲ್ಲಿ ಒಬ್ಬ ವ್ಯಕ್ತಿ, ಪಾರ್ವತಮ್ಮನ ಕೊರಳಿನಲ್ಲಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದ.
ನಂತರ ಕಳ್ಳ, ಪಕ್ಕದ ತೋಟದಲ್ಲಿ ಕಾಯುತ್ತಿದ್ದ ಇನ್ನೊಬ್ಬ ಸಹಚರನೊಂದಿಗೆ ಬೈಕ್‌ನಲ್ಲಿ ಕಲ್ಲಹಳ್ಳಿ ಕಡೆಗೆ ಪರಾರಿಯಾಗಿದ್ದಾನೆ ಎಂದು ಪಾರ್ವತಮ್ಮನವರ ಮಗ ಉಮೇಶ್ ಅವರು ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಕೈಗೊಂಡಿದ್ದರು.
ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್, ಎಎಸ್‌ಪಿ ಪರಮೇಶ್ವರ ಹೆಗಡೆ, ಮತ್ತು ಚನ್ನಗಿರಿ ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಅವರ ಮಾರ್ಗದರ್ಶನದಲ್ಲಿ, ಹೊನ್ನಾಳಿ ಸಿಪಿಐ ಹೆಚ್.ಸುನೀಲ್ ಕುಮಾರ್ ನೇತೃತ್ವದ ವಿಶೇಷ ತಂಡವು ತೀವ್ರ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಸಂಪೂರ್ಣ ಸ್ವತ್ತಿನ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖೆಯ ವೇಳೆ, ಮಹಿಳೆಯ ಗ್ರಾಮದವರೇ ಮತ್ತು ಆಕೆಯ ಸಂಬಂಧಿಕರೇ ಆದ ಈ ಯುವಕರು ಆರ್ಥಿಕ ಕಾರಣಗಳಿಗಾಗಿ ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ.

