ಹೊಸದಿಗಂತ ವರದಿ ಮೈಸೂರು:
ದೇಶದ ಎಲ್ಲ ರಾಜ್ಯಗಳಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯಿಂದ ಬೃಹತ್ ಅಧಿವೇಶನಗಳನ್ನು ನಡೆಸಿ, ರೈತರ ಬೇಡಿಕೆಗಳನ್ನು ಈಡೇರಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ರೈತರ ಎಚ್ಚರಿಕೆ ನೀಡಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು.
ಕೇರಳದ ಪಾಲಕಾಡನಲ್ಲಿ ಡಿ.20ರಂದು, ತಮಿಳುನಾಡಿನಲ್ಲಿ ಡಿ.21ರಂದು, ಕರ್ನಾಟಕದ ಬೆಂಗಳೂರಿನಲ್ಲಿ ಡಿ. 23ರಂದು ತೆಲಂಗಾಣದ ಹೈದರಾಬಾದ್ ದಲ್ಲಿ ಡಿ.26 ರಂದು ಬೃಹತ್ ಅಧಿವೇಶನಗಳನ್ನು ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ರೈತರ ಎಚ್ಚರಿಕೆಯ ಶಕ್ತಿ ಪ್ರದರ್ಶನ ನಡೆಸಲಾಗುವುದು ಎಂದು ಹೇಳಿದರು.
ಸರ್ಕಾರ ರೈತರ ಬೆಳೆ ಸಾಲದ ಬಡ್ಡಿಮನ್ನಾ ಎನ್ನುವುದು ನಾಟಕೀಯವಾಗಿದೆ,ರೈತರ ಕೃಷಿ ಸಾಲ ಸಂಪೂರ್ಣ ಮನ್ನಾಕ್ಕಾಗಿ ಆಗ್ರಹಿಸಿ ಡಿ. 23 ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿರೈತರ ಮಹಾಧಿವೇಶನ ನಡೆಯಲಿದೆ. ಇದೇ ದಿನ ರೈತರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ 23 ರಂದು ಸಾಲ ಮನ್ನಾ ಕೋರಿಕೆ ಅರ್ಜಿ ಸಲ್ಲಿಸಲಾಗುತ್ತದೆ ಸಾಲ ಪಡೆದ ರೈತರೇ ಈ ಅಧಿವೇಶನಕ್ಕೆ ಸ್ವಯಂ ಪ್ರೇರಿತರಾಗಿ ಬರಬೇಕು
ಎಂದು ತಿಳಿಸಿದರು.
ರೈತರ ಸಾಲ ಮನ್ನಾ ಆಗದಂತೆ ವಂಚಿಸಲು ಬ್ಯಾಂಕುಗಳು ಬಡ್ಡಿ ದುಪ್ಪಟ್ಟುಆಗುತ್ತದೆ ಸುಸ್ತಿಯಾಗುತ್ತದೆ ಎಂದು ಹೆದರಿಸಿ ಆಂಗ್ಲ ಭಾಷೆಯ ಪತ್ರಕ್ಕೆ ರೈತರ ಸಹಿ ಪಡೆದು ಸಾಲ ನವೀಕರಣ ಮಾಡುತ್ತಿದ್ದಾರೆ ಇದರಿಂದ ರೈತರು ಸಾಲ ಮನ್ನಾದಿಂದ ವಂಚಿತವಾಗುತ್ತಾರೆ ಈ ಬಗ್ಗೆ ರೈತರು ಜಾಗೃತರಾಗಿರಬೇಕು ಎಂದರು.
ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಆಗಬೇಕು ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು ಪ್ರಧಾನಿಯವರು ರೈತರಿಗೆ ಭರವಸೆ ನೀಡಿದಂತೆ ಕೇಂದ್ರ ಸರ್ಕಾರ ಕೂಡಲೇ ಈ ಕಾನೂನು ಜಾರಿ ಮಾಡಬೇಕು. ರಾಜ್ಯ ಸರ್ಕಾರ 2000ರೂ ಭಿಕ್ಷಾ ರೂಪದ ಪರಿಹಾರ ನೀಡುವುದು ಬೇಡ, ಸಂಪೂರ್ಣ ಬೆಳೆ ನಷ್ಟ ಪರಿಹಾರ ಕನಿಷ್ಠ 25,000 ರೂ ನಿಡಬೇಕು ಎಂದು ಆಗ್ರಹಿಸಿದರು.
60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5000 ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು. ರೈತನ ಮಗನ ಮದುವೆಯಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇಕಡ 10 ಮೀಸಲಾತಿ ನೀಡಿ, ರೈತರ ಮಕ್ಕಳು ಕೃಷಿಯಿಂದ ವಲಸೆ ಹೋಗುವುದನ್ನು ತಪ್ಪಿಸಬೇಕು, ಅರ್ಹ ರೈತರಿಗೆ ಕೂಡಲೇ ಸಾಗುವಳಿ ಪತ್ರ ನೀಡಬೇಕು. ಈ ಎಲ್ಲಾ ಒತ್ತಾಯಗಳ ಬಗ್ಗೆ , ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೆತರ) ಸಂಘಟನೆಯ ರಾಷ್ಟ್ರೀಯ ರೈತ ಮುಖಂಡರುಗಳು ಸರ್ಕಾರಕೆ ಎಚ್ಚರಿಕೆ ಸಂದೇಶ ನೀಡಲಿದ್ದಾರೆ. ಡಿ. 23ರ ಬೆಂಗಳೂರಿನ ಅಧಿವೇಶನದಲ್ಲಿ ರೈತರನ್ನು ಜಾಗೃತಿ ಮಾಡಿ ದೇಶದ ಎಲ್ಲಾ ರೈತರು ರಾಜಕೀಯೇತರವಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ರೈತ ಮುಖಂಡರಾದ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ವೆಂಕಟೇಶ್, ಹೆಗ್ಗುರು ರಂಗರಾಜು, ನೀಲಕಂಠಪ್ಪ, ವಾಜಮಂಗಲ ಮಹದೇವ ಮತ್ತಿತರರು ಉಪಸ್ಥಿತರಿದ್ದರು.