ಬಿಹಾರದಲ್ಲಿ ಮುಂದುವರಿದ ಕಗ್ಗೊಲೆ: ದುಷ್ಕರ್ಮಿಗಳ ಗುಂಡಿಗೆ ಮತ್ತೋರ್ವ ಬಿಜೆಪಿ ನಾಯಕ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಹಾರದಲ್ಲಿ ಬಿಜೆಪಿ ನಾಯಕರಿಗೆ ಜೀವ ಭಯದ ವಾತಾವರಣ ಹೆಚ್ಚಾಗುತ್ತಿದೆ. ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆ ಬೆನ್ನಲ್ಲೇ ಶೇಕ್‌ಪುರ ಜಿಲ್ಲೆಯಲ್ಲಿ ಮತ್ತೋರ್ವ ಬಿಜೆಪಿ ನಾಯಕ ಸುರೇಂದ್ರ ಕೆವತ್‌ ಅವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಘಟನೆಯಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮತ್ತು ಆಕ್ರೋಶ ವ್ಯಕ್ತವಾಗಿದೆ.

52 ವರ್ಷದ ಸುರೇಂದ್ರ ಕೆವತ್ ಅವರು ಶೇಕ್‌ಪುರದ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದಾರೆ. ಕೆವತ್ ಅವರಿಗೆ ನಾಲ್ಕು ಗುಂಡುಗಳು ತಗುಲಿದ್ದ ಅವರನ್ನು ತಕ್ಷಣವೇ ಬಿಹಾರದ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರ ಹಿಂದಿನ ಕಾರಣಗಳು ಇನ್ನೂ ಬಹಿರಂಗವಾಗಿಲ್ಲದಿದ್ದರೂ, ಪ್ರಕರಣದಲ್ಲಿ ರಾಜಕೀಯ ಕಾರಣಗಳ ಶಂಕೆ ವ್ಯಕ್ತವಾಗಿದೆ. ಬಿಜೆಪಿ ಮುಖಂಡರ ಮೇಲಿನ ಸತತ ಹತ್ಯೆಗಳಿಂದ ಸ್ಥಳೀಯ ರಾಜಕೀಯ ಪರಿಸ್ಥಿತಿಯು ಉದ್ವಿಗ್ನವಾಗಿದೆ. ಕೆಲವೇ ದಿನಗಳ ಹಿಂದೆ ಉದ್ಯಮಿ ಹಾಗೂ ಬಿಜೆಪಿ ನಾಯಕರಾದ ಗೋಪಾಲ್ ಖೇಮ್ಕಾ ಅವರು ಮನೆಯ ಹೊರಗೆ ಗುಂಡಿಕ್ಕಿ ಕೊಲೆಗೊಂಡಿದ್ದರು. ಇದೀಗ ಮತ್ತೆ ಇಂತಹದ್ದೇ ರೀತಿಯ ದಾಳಿ ನಡೆಯುವ ಮೂಲಕ ರಾಜ್ಯದ ಕಾನೂನು ವ್ಯವಸ್ಥೆಯ ಮೇಲೆ ಪ್ರಶ್ನೆ ಎದ್ದಿದೆ.

ಪೊಲೀಸರು ಈಗಾಗಲೇ ಪ್ರಕರಣದ ತನಿಖೆ ಆರಂಭಿಸಿದ್ದು, ಅಪರಾಧಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ. ಆದರೆ ಸರಕಾರದ ನಿರ್ಲಕ್ಷ್ಯ ಮತ್ತು ಸತತ ಹತ್ಯೆಗಳ ನಡುವೆಯೇ ಭದ್ರತಾ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!